ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು. ಜಮೀನಿನ ಗಲಾಟೆಯ ವಿಚಾರದಲ್ಲಿ ಶಿವಕುಮಾರ್ ಎಂಬುವವರು ಹತ್ಯೆಯಾಗಿದ್ದು, ಈ ಹತ್ಯೆಯ ಸಂಬಂಧ ಶಾಸಕ ಬೈರತಿ ಬಸವರಾಜು ಅವರ ಹೆಸರನ್ನು ಥಳಕುಹಾಕಿದ್ದಾರೆ. ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿದೆ ಎಂದು ಆರೋಪಿಸಿದರು.
ಹತ್ಯೆಯಾದ ಶಿವಕುಮಾರ್ ತಾಯಿ, ನಾನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯಾರ ಹೆಸರನ್ನು ಕೊಟ್ಟಿಲ್ಲ, ಬೈರತಿ ಬಸವರಾಜು ಯಾರು ಎಂದು ನನಗೆ ಗೊತ್ತಿಲ್ಲ, ಅವರ ಹೆಸರನ್ನು ಪೊಲೀಸ್ ದೂರಿನಲ್ಲಿ ನೀಡಿರುವುದಿಲ್ಲ ಎಂದು ಹೇಳಿದ್ದಾರೆ. ಆದರೂ, ಬೈರತಿ ಬಸವರಾಜು ಅವರ ಹೆಸರನ್ನು ಈ ಕೊಲೆ ಪ್ರಕರಣದ ಎಫ್‍ಐಆರ್‍ನಲ್ಲಿ ಸೇರಿಸಿ; ಇಲ್ಲದಿದ್ದರೆ ಈ ಕೇಸ್ ನಿಲ್ಲುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹಿಂಸೆ ನೀಡುತ್ತಿರುವುದನ್ನು ಈಗಾಗಲೇ ಶಿವಕುಮಾರ್ ತಾಯಿ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾರಣದಿಂದ ಬಿಜೆಪಿ ನಾಯಕರನ್ನು ಒಬ್ಬೊಬ್ಬರನ್ನಾಗಿ ಟಾರ್ಗೆಟ್ ಮಾಡಿ ಅವರ ಹೆಸರನ್ನು ಕೆಡಿಸುವಂತಹ, ಅಪಮಾನಗೊಳಿಸುವಂತಹ, ಕ್ರಿಮಿನಲ್ ಮೊಕದ್ದಮೆ ಹೂಡುವಂತಹ ಕೆಲಸವನ್ನು ಕಾಂಗ್ರೆಸ್ ನಾಯಕತ್ವ ಮಾಡುತ್ತಿದೆ ಎಂದು ಅವರು ದೂರಿದರು. ವಿಶೇಷವಾಗಿ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಈ ರೀತಿ ಟಾರ್ಗೆಟನ್ನು ನೀವೇ ಮಾಡುತ್ತಿದ್ದೀರ ಅಥವಾ ಮಾಡಿಸುತ್ತಿದ್ದೀರ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರವನ್ನು ನೀವೇ ಕೊಡಬೇಕು ಎಂದು ಅವರು ಆಗ್ರಹಿಸಿದರು.