ತಪ್ಪು ನಿರ್ಧಾರ, ಇದಕ್ಕೆ ನಾನೇ ಹೊಣೆ: ಸಿವಿಸಿ ಬಗ್ಗೆ ಪ್ರಧಾನಿ

ಸೋಮವಾರ, 7 ಮಾರ್ಚ್ 2011 (13:19 IST)
PTI
ಸಿವಿಸಿಯಾಗಿ ಪಿ.ಜೆ.ಥಾಮಸ್ ನೇಮಕವು 'ತಪ್ಪು ನಿರ್ಧಾರ' ಎಂದು ಒಪ್ಪಿಕೊಂಡ ಪ್ರಧಾನಿ ಮನಮೋಹನ್ ಸಿಂಗ್, ಅದರ "ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವೆ" ಎಂದು ಲೋಕಸಭೆಯಲ್ಲಿ ಸೋಮವಾರ ಹೇಳಿಕೆ ನೀಡಿದ್ದಾರೆ.

ಈ ಉತ್ತರದಿಂದ ಎಡಪಕ್ಷಗಳು ಸಂತೃಪ್ತವಾಗದೆ ಸಭಾತ್ಯಾಗ ನಡೆಸಿದರೆ, ಬಿಜೆಪಿ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು, ಪ್ರಧಾನಿಯ ಲಿಖಿತ ಹೇಳಿಕೆಗಳ ಬಗ್ಗೆ ಆಕ್ಷೇಪ ಎತ್ತಿದರು.

ಲಿಖಿತ ಹೇಳಿಕೆಯಲ್ಲಿ ಸಿವಿಸಿ ನೇಮಕಾತಿ ಬಗೆಗಿನ ವಿವರಗಳನ್ನು ನೀಡಲಾಗಿದ್ದು, ಕಳೆದ ವಾರ ಸುಪ್ರೀಂ ಕೋರ್ಟು ಇದನ್ನು ರದ್ದುಗೊಳಿಸಿರುವುದರ ಉಲ್ಲೇಖ ಮಾತ್ರ ಇತ್ತು. ಮತ್ತು ಸುಪ್ರೀಂ ಕೋರ್ಟ್ ತೀರ್ಮಾನವನ್ನು ನಾವು ಸ್ವೀಕರಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಹೇಳಿದ್ದರು ಪ್ರಧಾನಿ. ಮತ್ತು ನೇಮಕಾತಿ ಸಮಿತಿಯಲ್ಲಿದ್ದ ಸುಷ್ಮಾ ಅವರು ಆಕ್ಷೇಪ ಎತ್ತಿದ್ದರು ಎಂದೂ ಒಪ್ಪಿಕೊಂಡಿದ್ದರು. ಅವರು ಹೇಳಿಕೆಯನ್ನು ಓದಿ ಮುಗಿಸಿದ ಬಳಿಕ ಸುಷ್ಮಾ ಧ್ವನಿಯೆತ್ತಿದರು.

ಸಿವಿಸಿ ನೇಮಕದ ಹೊಣೆ ಹೊತ್ತುಕೊಳ್ಳುವ ಕುರಿತು ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ ಅಂಶ ಈ ಹೇಳಿಕೆಯಲ್ಲಿಲ್ಲದಿರುವುದು ಅಚ್ಚರಿಯುಂಟು ಮಾಡಿದೆ ಎಂದು ಆಕ್ಷೇಪವೆತ್ತಿದರು ಸುಷ್ಮಾ ಸ್ವರಾಜ್. ಕನಿಷ್ಠ ಪಕ್ಷ ಜಮ್ಮುವಿನಲ್ಲಿ ನೀವೇನು ಹೇಳಿದ್ದೀರೋ ಅದನ್ನಾದರೂ ಪುನರಾವರ್ತಿಸುತ್ತೀರಿ ಅಂದುಕೊಂಡಿದ್ದೆ ಎಂದು ಹೇಳಿದಾಗ, ಬಿಜೆಪಿ ಸದಸ್ಯರು "ಶೇಮ್ ಶೇಮ್" ಕೂಗಿದರು.

ತಕ್ಷಣವೇ ಮತ್ತೆ ಎದ್ದು ನಿಂತ ಪ್ರಧಾನಿ, ಸಿವಿಸಿ ನೇಮಕಾತಿಯು ತಪ್ಪು ತೀರ್ಮಾನವಾಗಿದ್ದು, ಇದರ ಎಲ್ಲ ಹೊಣೆಯನ್ನೂ ತಾನೇ ಹೊರುವುದಾಗಿ ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ