ನಮಗೆ ಹಜ್ ಸಬ್ಸಿಡಿ ಬೇಡ: ಮುಸ್ಲಿಂ ಸಂಸದರ ಒತ್ತಾಯ

ಗುರುವಾರ, 10 ಮಾರ್ಚ್ 2011 (11:45 IST)
ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಸಬ್ಸಿಡಿ ಬೇಡ ಎಂದು ವಾದಿಸಿದ ಹಲವಾರು ಮುಸ್ಲಿಂ ಸಂಸದರು, ಅದರ ಬದಲು ಈ ವಾರ್ಷಿಕ ಯಾತ್ರೆಗೆ ತೆರಳುತ್ತಿರುವ ಯಾತ್ರಿಗಳಿಗೆ ವಿಮಾನಯಾನ ಸಂಸ್ಥೆಗಳು ಒಳ್ಳೆಯ ಸೌಲಭ್ಯ ಮತ್ತು ಕಡಿಮೆ ದರ ವಿಧಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಸೌದಿ ಅರೇಬಿಯಲ್ಲಿ ಒಳ್ಳೆಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಯಾತ್ರೆಗಾಗಿ ನೀಡಲಾಗುವ ತಾತ್ಕಾಲಿಕ ಪಾಸ್‌ಪೋರ್ಟುಗಳನ್ನು ಕೂಡ ರದ್ದುಗೊಳಿಸಿ, ಕಾಯಂ ಪಾಸ್‌ಪೋರ್ಟ್ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ವಿವಿಧ ಪಕ್ಷಗಳ ಸಂಸದರು ಸೋಮವಾರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ, ಹಜ್ ಯಾತ್ರೆಯ ಸುಧಾರಣೆಗಳ ಕುರಿತು ಚರ್ಚಿಸಿದರು. "ನಮಗೆ ಸಬ್ಸಿಡಿ ಬೇಡ. ಇದು ಭಿಕ್ಷೆ ಸ್ವೀಕರಿಸಿದಂತೆ. ಮಲೇಷ್ಯಾವು ಹಜ್ ಯಾತ್ರೆ ನಿರ್ವಹಿಸುತ್ತಿರುವ ರೀತಿಯಲ್ಲೇ ನಮಗೂ ದೀರ್ಘಕಾಲೀನ ಯೋಜನೆ ಬೇಕು" ಎಂದು ಆರ್ಎಲ್‌ಡಿ ರಾಜ್ಯಸಭಾ ಸದಸ್ಯ ಮೆಹಮೂದ್ ಎ ಮದನಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಇದೇ ಭಾವನೆಯನ್ನು ವ್ಯಕ್ತಪಡಿಸಿದ ಬಿಜೆಪಿ ಲೋಕಸಭಾ ಸದಸ್ಯ ಸೈಯದ್ ಶಹನವಾಜ್ ಹುಸೇನ್, ಸಬ್ಸಿಡಿಗೆ ಏನೂ ಅರ್ಥವಿಲ್ಲ. ಯಾಕೆಂದರೆ ಹಜ್‌ಗೆ ತೆರಳುವ ಜನ ಸಾಮಾನ್ಯರ ಬದಲಾಗಿ ಮಧ್ಯವರ್ತಿಗಳೇ ಇದರಿಂದ ಲಾಭ ಪಡೆಯುತ್ತಿದ್ದಾರೆ ಎಂದರು.

ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಮಾತ್ರವೇ ಈ ಯಾನವನ್ನು ಸೀಮಿತಗೊಳಿಸದೆ, ಖಾಸಗಿ ವಿಮಾನಯಾನ ಸಂಸ್ಥೆಗಳನ್ನು ಸೇರಿಸಿಕೊಳ್ಳಬೇಕೆಂದು ಕೆಲವು ಸಂಸದರು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ