ದ್ರಾವಿಡ ಪಕ್ಷಗಳು ಹೇಳುತ್ತಿರುವಂತೆ ಭಾರೀ ಉಚಿತ ಕೊಡುಗೆಗಳನ್ನು ನೀಡುವ ಭರವಸೆಗಳನ್ನು ನಾವು ನೀಡುತ್ತಿಲ್ಲ. ನಮ್ಮನ್ನು ಅಧಿಕಾರಕ್ಕೆ ತಂದರೆ ಪ್ರಾಮಾಣಿಕ ಮತ್ತು ಪಾರದರ್ಶಕ ಸರಕಾರವನ್ನು ನೀಡುತ್ತೇವೆ ಎಂದು ತಮಿಳುನಾಡು ಬಿಜೆಪಿ ಆಶ್ವಾಸನೆ ನೀಡಿದೆ.
ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್, ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸಲು ದ್ರಾವಿಡ ಪಕ್ಷಗಳು ವಿಫಲವಾಗಿವೆ. ಅವುಗಳು ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಲ್ಲೇ ಕಾಲ ಕಳೆಯುತ್ತಿವೆ ಎಂದು ಆರೋಪಿಸಿದರು.
ಡಿಎಂಕೆ ಮತ್ತು ಎಐಎಡಿಎಂಕೆಗಳು ಪ್ರಕಟಿಸಿರುವ ಉಚಿತ ಕೊಡುಗೆಗಳನ್ನು 'ಢಾಂಬಿಕತೆ' ಎಂದು ಟೀಕಿಸಿರುವ ಲಕ್ಷ್ಮಣ್, ಬೆಲೆಯೇರಿಕೆ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವುದಕ್ಕೆ ದ್ರಾವಿಡ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಅಧಿಕಾರಕ್ಕೆ ಬರುವಂತೆ ಜನತೆ ಮಾಡಿದಲ್ಲಿ, ರಾಜ್ಯದ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿ ಮಾಡುವುದಾಗಿ ಹೇಳಿದರು.
ಬಿಜೆಪಿಯು ಈ ಬಾರಿ 194 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಪೊನ್ ರಾಧಾಕೃಷ್ಣನ್ ಹೇಳಿದರು.
ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದರಲ್ಲಿ ನಮಗೆ ಆಸಕ್ತಿಯಿಲ್ಲ. ಆದರೆ ನಮ್ಮನ್ನು ಅಧಿಕಾರಕ್ಕೆ ತಂದರೆ ದಕ್ಷ ಮತ್ತು ಪಾರದರ್ಶಕ ಸರಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಣಾಳಿಕೆಯಲ್ಲಿನ ಕೆಲವು ಅಂಶಗಳನ್ನು ವಿವರಿಸಿದ ಅವರು, ತಾವು ಅಧಿಕಾರಕ್ಕೆ ಬಂದಲ್ಲಿ ತಮಿಳುನಾಡಿನ ರೈತರಿಗೆ ಸಹಾಯವಾಗುವಂತೆ ಕರ್ನಾಟಕದಿಂದ ವರ್ಷಕ್ಕೆ 205 ಟಿಎಂಸಿ ಕಾವೇರಿ ನೀರನ್ನು ತರಲು ಯತ್ನಿಸುವುದಾಗಿ ಹೇಳಿದರು.
ವಿಶ್ವದ ತಮಿಳರ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯದ ಸ್ಥಾಪನೆ, ಶ್ರೀಲಂಕಾ ತಮಿಳರ ಕಲ್ಯಾಣಕ್ಕಾಗಿ ಹೋರಾಟದ ಆಶ್ವಾಸನೆಗಳನ್ನು ಕೂಡ ಬಿಜೆಪಿ ನೀಡಿದೆ.