ನಮ್ಮ ಸಿದ್ಧಾಂತದ ಮೂಲಾಧಾರವೇ ಹಿಂದುತ್ವ: ಆರೆಸ್ಸೆಸ್

ಮಂಗಳವಾರ, 29 ಮಾರ್ಚ್ 2011 (09:06 IST)
ಹಿಂದುತ್ವ ಕಡೆಗಿನ ಬಿಜೆಪಿಯ ನಿಲುವು ಅವಕಾಶವಾದಿತನದಿಂದ ಕೂಡಿದ್ದು ಎಂದು ಆ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ ಎಂಬುದಕ್ಕೆ ಅಂತ್ಯ ಹಾಡಲು ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಮುಂದಾಗಿದೆ. ಹಿಂದುತ್ವ ಎನ್ನುವುದು ನಮ್ಮ ಸೈದ್ಧಾಂತಿಕ ಚಳವಳಿಯ ಮೂಲಾಧಾರ ಎಂದು ತಿಳಿಸಿದೆ.

ತಮ್ಮ ಸೈದ್ಧಾಂತಿಕ ನಿಲುವಿನ ಬಗ್ಗೆ ಬಿಜೆಪಿ ನಾಯಕತ್ವ ಈಗಾಗಲೇ ಸ್ಪಷ್ಟನೆ ನೀಡಿದೆ. ನಾವು ನಮ್ಮ ನಿಲುವಿನ ಬಗ್ಗೆ ಹೇಳುವುದಾದರೆ, ಹಿಂದುತ್ವವು ನಮ್ಮ ಸೈದ್ಧಾಂತಿಕ ಚಳವಳಿಯಲ್ಲಿ ಪ್ರಮುಖವಾದುದು ಎಂದು ಆರೆಸ್ಸೆಸ್ ನಾಯಕ ರಾಮ್ ಮಾಧವ್ ತಿಳಿಸಿದ್ದಾರೆ.

ವಿಕಿಲೀಕ್ಸ್ ರಹಸ್ಯ ದಾಖಲೆಗಳ ಕುರಿತ ಪ್ರಶ್ನೆ ಬಂದಾಗ, ಹಿಂದುತ್ವದ ಬಗ್ಗೆ ಆರೆಸ್ಸೆಸ್ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದರು.

ತಾನು 'ಅವಕಾಶವಾದಿತನ' ಎಂಬ ಶಬ್ಧವನ್ನು ಬಳಕೆ ಮಾಡಿಲ್ಲ ಎಂದು ಬಿಜೆಪಿ ನಾಯಕ ಜೇಟ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮಟ್ಟಿಗೆ ಹೇಳುವುದಾದರೆ, ಪ್ರತಿಯೊಬ್ಬ ಸ್ವಯಂಸೇವಕನೂ ಹಿಂದುತ್ವದಲ್ಲಿ ನಂಬಿಕೆ ಹೊಂದಿದ್ದಾನೆ. ನಮ್ಮ ರಾಷ್ಟ್ರದ ಹೆಗ್ಗುರುತೇ ಹಿಂದುತ್ವ ಎಂದು ನಂಬಿದ್ದಾರೆ ಎಂದು ಆರೆಸ್ಸೆಸ್ ನಾಯಕ ವಿವರಿಸಿದರು.

06-05-2005ರಂದು ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ರಾಜಕೀಯ ಸಲಹೆಗಾರ ರಾಬರ್ಟ್ ಬ್ಲೇಕ್ ಅವರ ಜತೆ ಜೇಟ್ಲಿ ಖಾಸಗಿ ಮಾತುಕತೆ ನಡೆಸಿದ್ದರು. ಇದನ್ನು 10-05-2005ರಂದು ಅಮೆರಿಕಾಕ್ಕೆ ರಾಯಭಾರಿ ವರದಿ ಮಾಡಿದ್ದರು. ವಿಕಿಲೀಕ್ಸ್ ಕೈ ಸೇರಿದ್ದ ಆ ದಾಖಲೆ ಇತ್ತೀಚೆಗಷ್ಟೇ 'ದಿ ಹಿಂದೂ' ಪತ್ರಿಕೆ ಮೂಲಕ ಬಹಿರಂಗವಾಗಿತ್ತು.

ಹಿಂದುತ್ವದ ಕುರಿತು ರಾಯಭಾರಿ ಮಾಡಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಜೇಟ್ಲಿ, ಹಿಂದೂ ರಾಷ್ಟ್ರೀಯತೆ ಎನ್ನುವುದು ಬಿಜೆಪಿಯ ಪಾಲಿಗೆ ಯಾವತ್ತೂ ಒಂದು ಜೀವಂತವಾಗಿರುವ ಚರ್ಚೆಯ ವಿಚಾರ. ಅಲ್ಲದೆ, ಇದು 'ಅವಕಾಶವಾದಿತನ'ಕ್ಕೆ ಸಂಬಂಧಪಟ್ಟದ್ದಾಗಿದೆ ವಿಚಾರ ಎಂದಿದ್ದರು ಎಂದು ವಿಕಿಲೀಕ್ಸ್ ದಾಖಲೆ ಹೇಳಿದೆ.

ವೆಬ್ದುನಿಯಾವನ್ನು ಓದಿ