ಪ್ರಧಾನಿಯಾಗೋದು ಗಾಂಧಿ ಕುಟುಂಬದ ಜನ್ಮಸಿದ್ಧ ಹಕ್ಕೇ?: ಕುಟುಕಿದ ಬಿಜೆಪಿ

ಶುಕ್ರವಾರ, 25 ಮಾರ್ಚ್ 2011 (17:01 IST)
ಪ್ರಧಾನ ಮಂತ್ರಿಯಾಗುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಎಲ್.ಕೆ. ಆಡ್ವಾಣಿ ಭಾವಿಸಿದಂತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಇದು ಬೇರೆ ಯಾರಿಗೋ ಹೇಳಿದ್ದಾಗಿರಬಹುದು ಎಂದು ಪರೋಕ್ಷವಾಗಿ ಗಾಂಧಿ ಕುಟುಂಬವನ್ನು ಕುಟುಕಿದೆ.

'ನಾವು ಆಕ್ರಮಣಕಾರರು ಎಂಬ ಧೋರಣೆಯನ್ನು ಪ್ರಮುಖ ಪ್ರತಿಪಕ್ಷ 2004ರಿಂದಲೇ ತಳೆದಿದೆ. ತಾನು ಪ್ರಧಾನ ಮಂತ್ರಿಯಾಗುವುದು ಜನ್ಮಸಿದ್ಧ ಹಕ್ಕು ಎಂದು ಆಡ್ವಾಣಿಯವರು ನಂಬಿದ್ದಾರೆ. ಪ್ರಧಾನಿ ಪಟ್ಟ ಸಿಗದೇ ಇರುವ ಕಾರಣ ಅವರು ನನ್ನನ್ನು ಕ್ಷಮಿಸಿಯೇ ಇಲ್ಲ. ನೀವು ಪ್ರಧಾನಿ ಆಗಲೇ ಬೇಕೆಂದಿದ್ದರೆ ಇನ್ನು ಮೂರುವರೆ ವರ್ಷಗಳವರೆಗೆ ಕಾಯಿರಿ' ಎಂದು ಪ್ರಧಾನಿ ಸಿಂಗ್ ಸಂಸತ್ತಿನಲ್ಲಿ ಬುಧವಾರ ಹೇಳಿದ್ದರು.

ಇದನ್ನು ಉಲ್ಲೇಖಿಸಿರುವ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಪ್ರಧಾನಿ ಸಿಂಗ್ ನೀಡಿರುವ ಹೇಳಿಕೆ ಆಡ್ವಾಣಿಯವರ ಬಗೆಗೆ ಅಲ್ಲ, ಅದು ಬೇರೆ ಯಾರದೋ ಬಗ್ಗೆ ಆಗಿರಬಹುದು ಎಂದರು.

ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದು ಗಾಂಧಿ-ನೆಹರು ಕುಟುಂಬವನ್ನು. ಆದರೆ ಮಾತು ಮುಂದುವರಿಸುತ್ತಾ ನೇರ ಪ್ರಸ್ತಾಪ ಮಾಡಿದರು.

'ಕುಟುಂಬ ರಾಜಕಾರಣವನ್ನು ಸಂಪ್ರದಾಯವನ್ನಾಗಿ ಮಾಡಿಕೊಂಡು ಬಂದಿರುವ ಗಾಂಧಿ ಕುಟುಂಬಕ್ಕೆ ಪ್ರಧಾನ ಮಂತ್ರಿಯವರು ಈ ಸಂದೇಶವನ್ನು ರವಾನಿಸಲು ಯತ್ನಿಸಿದ್ದಾರೆ' ಎಂದು ಕುಟುಕಿದರು.

ಗಾಂಧಿ-ನೆಹರು ಕುಟುಂಬದಿಂದ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ಹಿಂದೆ ಪ್ರಧಾನ ಮಂತ್ರಿಗಳಾಗಿ ದೇಶವನ್ನು ಬಹುಕಾಲ ಆಳಿದವರು. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಕೂಡ ಅದೇ ಸಾಲಿಗೆ ಸೇರಲಿರುವ ಹಿನ್ನೆಲೆಯಲ್ಲಿ ಜೇಟ್ಲಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ, ಸಂಸತ್ತಿನ ಬಜೆಟ್ ಅಧಿವೇಶನ ಯಶಸ್ವಿಯಾಗಿದೆ ಎಂದು ಮುಕ್ತಾಯವಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಬಜೆಟ್ ಅಧಿವೇಶನವು ಯಶಸ್ವಿಯಾಗಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ನಾವು ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿದ್ದೇವೆ. ಕೇಂದ್ರ ಜಾಗೃತ ಆಯುಕ್ತರ (ಸಿವಿಸಿ) ನೇಮಕಾತಿ ಪ್ರಕರಣ ಕೂಡ ಒಂದು ನ್ಯಾಯಬದ್ಧ ಅಂತ್ಯ ಕಂಡಿದೆ ಎಂದು ಸುಷ್ಮಾ ಅಭಿಪ್ರಾಯಪಟ್ಟರೆ, ಜೇಟ್ಲಿ, ಸಿವಿಸಿ ವಿವಾದದ ಕುರಿತು ಸರಕಾರವು ಸಮಾಧಾನಕರ ಉತ್ತರವನ್ನೇ ನೀಡಿಲ್ಲ ಎಂದರು.

2ಜಿ ತರಂಗಾಂತರ ಹಗರಣ ಕುರಿತು ಜೆಪಿಸಿ ರಚಿಸಬೇಕೆಂಬ ಭಾರೀ ಒತ್ತಡಕ್ಕೆ ಮಣಿದ ಸರಕಾರ, ಈ ಸಂಬಂಧ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿದೆ. ಹಗರಣದ ಪ್ರಮುಖ ಅಂಶಗಳ ಕುರಿತು ಜೆಪಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ