ಬಂಧನ: ಮಾಯಾವತಿ ಸರ್ವಾಧಿಕಾರಿ ಎಂದ ಮುಲಾಯಂ ಪುತ್ರ

ಬುಧವಾರ, 9 ಮಾರ್ಚ್ 2011 (15:10 IST)
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಯಾವತಿ ರಾಜಕೀಯ ದರ್ಬಾರು ವಿರುದ್ಧ ಬೀದಿ ಬೀದಿಗಳಲ್ಲಿ ಪ್ರತಿಭಟನೆ ಹೆಚ್ಚಾಗಿರುವಂತೆಯೇ, ಅಲ್ಲಿನ ಸರಕಾರವೂ ಪ್ರತಿಪಕ್ಷಗಳನ್ನು ಮಣಿಸಲು ಅಧಿಕಾರವನ್ನು ಸಮರ್ಥವಾಗಿಯೇ ಪ್ರಯೋಗಿಸುತ್ತಿದೆ. ಈ ಸಂಘರ್ಷದ ಮುಂದುವರಿದ ಭಾಗವಾಗಿ ಬುಧವಾರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ, ಮಾಯಾವತಿ ಕ್ರಮಕ್ಕೆ ಕೆರಳಿ ಕೆಂಡವಾಗಿರುವ ಅಖಿಲೇಶ್, ರಾಜ್ಯ ಸರಕಾರವು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ನನ್ನ ಬಂಧನವೇ ಇದಕ್ಕೆ ಸಾಕ್ಷಿ ಎಂದು ಅಬ್ಬರಿಸಿದ್ದಾರೆ. ಎಸ್ಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷರೂ ಆಗಿರುವ ಅಖಿಲೇಶ್ ಅವರು ದೆಹಲಿಯಿಂದ ವಾಪಸಾಗುತ್ತಿದ್ದಂತೆಯೇ ಅಮೌಸಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ರಾಜ್ಯ ಸರಕಾರದ ಸರ್ವಾಧಿಕಾರಿ ಪ್ರವೃತ್ತಿ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ ಎಂದವರು ಘೋಷಿಸಿದ್ದಾರೆ.

ಉತ್ತರ ಪ್ರದೇಶ ಆಡಳಿತಾರೂಢ ಬಹುಜನ ಸಮಾಜ ಪಕ್ಷದ ವಿರುದ್ಧ ಸಮಾಜವಾದಿ ಪಕ್ಷವು ಪ್ರತಿಭಟನೆ ನಡೆಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಖಿಲೇಶ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಖಿಲೇಶ್ ಅವರು ಲಖ್ನೋ ಮತ್ತು ತಮ್ಮ ಸಂಸದೀಯ ಕ್ಷೇತ್ರವಾದ ಕನೌಜ್‌ನಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡುವವರಿದ್ದರು.

"ಬಿಎಸ್‌ಪಿ ಹಠಾವೋ, ಪ್ರದೇಶ್ ಬಚಾವೋ" ಎಂಬ ಮೂರು ದಿನಗಳ ಆಂದೋಲನವನ್ನು ಸಮಾಜವಾದಿ ಪಕ್ಷ (ಎಸ್ಪಿ) ಮಾರ್ಚ್ 7ರಂದು ಆರಂಭಿಸಿತ್ತು. ಸೋಮವಾರ ಮುಲಾಯಂ ಸಿಂಗ್ ಅವರನ್ನೂ ಪೊಲೀಸರು ಬಂಧಿಸಿ ನಂತರ ಬಿಟ್ಟಿದ್ದರು. ಈ ಕ್ರಮವು ಬುಧವಾರ ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೂ ಕಾರಣವಾಯಿತು.

ವೆಬ್ದುನಿಯಾವನ್ನು ಓದಿ