ಕಾಂಗ್ರೆಸ್ ಮತ್ತು ಯುಪಿಎ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿ ಬಿಜೆಪಿಯತ್ತ ಬರುತ್ತಿರುವ 'ವಿಕಿಲೀಕ್ಸ್' ಭಾರೀ ಗದಾಪ್ರಹಾರವನ್ನೇ ಮಾಡುತ್ತಿದೆ. ಕಾಂಗ್ರೆಸ್ ಮುಂತಾದ 'ಜಾತ್ಯತೀತ' ಪಕ್ಷಗಳು ಆರೋಪ ಮಾಡುತ್ತಿರುವುದು ನಿಜ, ಬಿಜೆಪಿಯ 'ಹಿಂದೂ ರಾಷ್ಟ್ರೀಯತೆ' ಬರೀ ಬೊಗಳೆ ಎಂದು ಸ್ವತಃ ಅರುಣ್ ಜೇಟ್ಲಿಯವರೇ ಹೇಳಿಕೊಂಡಿದ್ದರು ಎಂದು ಈಗ ಬಹಿರಂಗವಾಗಿದೆ.
06-05-2005ರಂದು ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ರಾಜಕೀಯ ಸಲಹೆಗಾರ ರಾಬರ್ಟ್ ಬ್ಲೇಕ್ ಅವರ ಜತೆ ಪ್ರಸಕ್ತ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿರುವ ಅರುಣ್ ಜೇಟ್ಲಿ ಖಾಸಗಿ ಮಾತುಕತೆ ನಡೆಸಿದ್ದರು. ಇದನ್ನು 10-05-2005ರಂದು ಅಮೆರಿಕಾಕ್ಕೆ ರಾಯಭಾರಿ ವರದಿ ಮಾಡಿದ್ದರು.
ಹಿಂದುತ್ವದ ಕುರಿತು ರಾಯಭಾರಿ ಮಾಡಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಜೇಟ್ಲಿ, ಹಿಂದೂ ರಾಷ್ಟ್ರೀಯತೆ ಎನ್ನುವುದು ಬಿಜೆಪಿಯ ಪಾಲಿಗೆ ಯಾವತ್ತೂ ಒಂದು ಜೀವಂತವಾಗಿರುವ ಚರ್ಚೆಯ ವಿಚಾರ ಎಂದಿದ್ದರು.
ಪ್ರಸಕ್ತ ಬಹಿರಂಗವಾಗಿಯೇ ನಡೆಯುತ್ತಿರುವ ಒಳ ಜಗಳದ ಹೊರತಾಗಿಯೂ ಭಾರತದ ರಾಜಕೀಯದಲ್ಲಿ ಬಿಜೆಪಿಯು ಪ್ರಮುಖ ಪಕ್ಷ ಎಂದಿದ್ದ ಜೇಟ್ಲಿಗೆ, ಹಿಂದುತ್ವದ ಕುರಿತು ಬ್ಲೇಕ್ ಪ್ರಶ್ನಿಸಿದ್ದರು. ಹಿಂದೂ ರಾಷ್ಟ್ರೀಯತೆಯು ಬಿಜೆಪಿಯ ಪಾಲಿಗೆ ಯಾವತ್ತೂ 'ಹಾಲು ಕೊಡುವ ಹಸು' ಎಂಬ ಅರ್ಥದ ಉತ್ತರ ನೀಡಿದ್ದರು. ಅಲ್ಲದೆ, ಇದು ಅವಕಾಶವಾದಿತನಕ್ಕೆ ಸಂಬಂಧಪಟ್ಟ ವಿಚಾರ ಎಂದೂ ಹೇಳಿದ್ದರು.
ಇದಕ್ಕೆ ಜೇಟ್ಲಿ ಉದಾಹರಣೆಯನ್ನಾಗಿ ನೀಡಿದ್ದು ಈಶಾನ್ಯ ಭಾರತವನ್ನು.
ಬಾಂಗ್ಲಾದೇಶದಿಂದ ಮುಸ್ಲಿಮರ ಅಕ್ರಮ ವಲಸೆಯ ಕುರಿತು ಸಾರ್ವಜನಿಕ ಆಕ್ರೋಶ ಇರುವುದರಿಂದ ಅಲ್ಲಿ 'ಹಿಂದುತ್ವ ಸಿದ್ಧಾಂತ' ಹೆಚ್ಚು ಕೆಲಸ ಮಾಡುತ್ತದೆ. ದೆಹಲಿಯಲ್ಲಿ ಈಗ ಹಿಂದೂ ರಾಷ್ಟ್ರೀಯತೆ ಹೆಚ್ಚು ಪ್ರತಿಧ್ವನಿಸುತ್ತಿಲ್ಲ. ಆದರೆ ಸಂಸತ್ ದಾಳಿಯಂತಹ ಇನ್ನೊಂದು ಭಯೋತ್ಪಾದನಾ ದಾಳಿ ಗಡಿಯಾಚೆಯಿಂದ ನಡೆದರೆ ಎಲ್ಲವೂ ಬದಲಾವಣೆಯಾಗಬಹುದು ಎಂದಿದ್ದರು.
ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲೆಂಡ್, ಸಿಕ್ಕಿಂ ಮತ್ತು ತ್ರಿಪುರಾಗಳಲ್ಲಿ ಬಾಂಗ್ಲಾದೇಶಿಗರು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ ಮೇಲಿನಂತೆ ಹೇಳಿದ್ದರು.
ಜೇಟ್ಲಿ ಜತೆಗಿನ ಮಾತುಕತೆಯ ನಂತರ ತನ್ನ ಅಭಿಪ್ರಾಯವನ್ನು ಸೇರಿಸಿದ್ದ ಬ್ಲೇಕ್, ದಾಖಲೆಯನ್ನು ಅಮೆರಿಕಾಕ್ಕೆ ರವಾನಿಸಿದ್ದರು.
ಜೇಟ್ಲಿ ಸಂಘ ಪರಿವಾರದ ಜತೆಗಿನ ವಿಶ್ವಾಸ ದುರ್ಬಲವಾಗಿವೆ ಮತ್ತು ಬಿಜೆಪಿ ನೆಲೆಗಟ್ಟನ್ನು ಒಗ್ಗೂಡಿಸುವ ಸಂಘ ಪರಿವಾರದ ನಿಲುವು ಕೂಡ ಜೇಟ್ಲಿಯವರಲ್ಲಿ ಇದ್ದಂತಿಲ್ಲ ಎಂಬುದು ಅವರ ಹಿಂದುತ್ವದ ಬಗೆಗಿನ ಹೇಳಿಕೆಗಳು ತೋರಿಸುತ್ತವೆ ಎಂದು ಬ್ಲೇಕ್ ವರದಿಯಲ್ಲಿ ನಮೂದಿಸಿದ್ದರು.