ಯೋಗ ಗುರು ಬಾಬಾ ರಾಮದೇವ್ ಆಸ್ತಿ 1152 ಕೋಟಿ ರೂ.!

ಸೋಮವಾರ, 28 ಫೆಬ್ರವರಿ 2011 (10:43 IST)
PR

ಕಪ್ಪುಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸುತ್ತಾ ಬಂದಿರುವ, ಇನ್ನೇನು ರಾಜಕೀಯ ಪಕ್ಷವೊಂದನ್ನು ಅಸ್ತಿತ್ವಕ್ಕೆ ತರುವ ಹವಣಿಕೆಯಲ್ಲಿರುವ ಯೋಗ ಗುರು ಬಾಬಾ ರಾಮದೇವ್ ಅವರೇ ಕಪ್ಪುಹಣದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ಗೋಚರಿಸುತ್ತಿವೆ. ಅವರು ದೇಶ-ವಿದೇಶಗಳಲ್ಲಿ ಹೊಂದಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಕುರಿತು ತನಿಖೆ ನಡೆಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ.

ವರದಿಗಳ ಪ್ರಕಾರ ರಾಮದೇವ್ (ಪತಂಜಲಿ ಯೋಗಪೀಠ) ಹೊಂದಿರುವ ಒಟ್ಟು ಆಸ್ತಿಯ ಮೌಲ್ಯ ಸುಮಾರು 1,152 ಕೋಟಿ ರೂಪಾಯಿಗಳು. ಇದರಲ್ಲಿ ಹರಿದ್ವಾರ ಸೇರಿದಂತೆ ದೇಶದ ವಿವಿಧೆಡೆ ರಾಮದೇವ್ ಹೊಂದಿರುವ ಆಶ್ರಮಗಳು, ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳು ಸೇರಿವೆ. ಇವುಗಳಿಂದ ಹೊರತಾದ ಆಸ್ತಿಗಳು ಕೂಡ ಇರಬಹುದು. ಅವೆಲ್ಲವನ್ನೂ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.

(ಮುಂದಿನ ಪುಟ ನೋಡಿ)

PR

ಸಾವಿರ ಕೋಟಿ ಒಡೆಯ ಬಾಬಾ...
'ಸ್ಟಾರ್ ನ್ಯೂಸ್' ವಾರ್ತಾವಾಹಿನಿ ವರದಿಯ ಪ್ರಕಾರ ಬಾಬಾ ರಾಮದೇವ್ ಹೊಂದಿರುವ ಒಟ್ಟು ಆಸ್ತಿ 1,152 ಕೋಟಿ ರೂಪಾಯಿ.

ಅವರು ಹರಿದ್ವಾರದಲ್ಲಿ 1,000 ಎಕರೆ ಜಮೀನು ಹೊಂದಿದ್ದಾರೆ. ಇದರ ಅಂದಾಜು ಮೌಲ್ಯ 300 ಕೋಟಿ ರೂ. ಸುಮಾರು 100 ಎಕರೆ ವಿಸ್ತಾರದಲ್ಲಿನ ಆಶ್ರಮವೀಗ 100 ಕೋಟಿ ತೂಗುತ್ತಿದೆ.

ಹರಿದ್ವಾರದಲ್ಲೇ ರಾಮದೇವ್ ನಿರ್ಮಿಸಿರುವ ಫುಡ್ ಪಾರ್ಕ್‌ಗೆ 500 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲೇ ಪಕ್ಕದಲ್ಲಿ 25 ಕೋಟಿ ರೂಪಾಯಿಗಳ ಬೃಹತ್ ಕಟ್ಟಡವೊಂದಿದೆ.

ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ 20 ಕೋಟಿ ಬೆಲೆ ಬಾಳುವ 96 ಎಕರೆ ಜಮೀನು ಹೊಂದಿದ್ದಾರೆ. ವಿದೇಶಗಳ ಲೆಕ್ಕಾಚಾರಕ್ಕೆ ಹೋಗುವುದಾದರೆ, ಸ್ಕಾಟ್ಲೆಂಡಿನಲ್ಲಿ 14 ಕೋಟಿ ರೂಪಾಯಿ ಮೌಲ್ಯದ 750 ಎಕರೆ ಜಮೀನು ರಾಮದೇವ್ ಒಡೆತನದಲ್ಲಿದೆ. ಅಮೆರಿಕಾದ ಹೌಸ್ಟನ್‌ನಲ್ಲಿ 99 ಎಕರೆ ಜಮೀನಿದೆ. ಇದರ ರೇಟು ಈಗಿನ ಲೆಕ್ಕದಲ್ಲಿ 98 ಕೋಟಿ ರೂಪಾಯಿಗಳು.
(ಮುಂದಿನ ಪುಟ ನೋಡಿ)

PR

ಆದಾಯದ ಮೂಲ ಏನು?
ಮೇಲ್ನೋಟಕ್ಕೆ ಕಾಣುತ್ತಿರುವುದು ಯೋಗ ತರಬೇತಿ, ಅದಕ್ಕೆ ಸಂಬಂಧಪಟ್ಟ ಸಿಡಿ-ಪುಸ್ತಕಗಳ ಮಾರಾಟ, ಆಯುರ್ವೇದ ಔಷಧಿಗಳ ಮಾರಾಟ. ಇದನ್ನು ಹೊರತುಪಡಿಸಿದರೆ ಯಾವುದೇ ಉದ್ಯಮದಲ್ಲಿ ಅವರು ತೊಡಗಿಸಿಕೊಂಡಿಲ್ಲ. ಆದರೆ ತನ್ನ ಭಕ್ತರಿಂದ ಭಾರೀ ದೇಣಿಗೆಗಳನ್ನು ಸ್ವೀಕರಿಸುತ್ತಿರುವುದಾಗಿ ಸ್ವತಃ ರಾಮದೇವ್ ಒಪ್ಪಿಕೊಂಡಿದ್ದಾರೆ.

ಇದನ್ನೇ ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪ್ರಶ್ನಿಸಿರುವುದು. ತಾವು ಭಕ್ತರಿಂದ ಪಡೆಯುವ ಹಣ ಸಾಚಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ರಾಮದೇವ್ ಅವರಿಗೆ ತಾಕೀತು ಮಾಡಿದ್ದರು.

ವರದಿಗಳ ಪ್ರಕಾರ ರಾಮದೇವ್ ಅವರಿಗೆ ಆರ್ಯುವೇದ ಔಷಧಿಗಳಿಂದ ಮಾಸಿಕ 25 ಕೋಟಿ ರೂಪಾಯಿಗಳ ಆದಾಯವಿದೆ. ಒಟ್ಟಾರೆ ಔಷಧಿಗಳ ಮಾರಾಟದಿಂದಲೇ 300 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಯುತ್ತದೆ. ಉಳಿಯುವ ಲಾಭ ಶೇ.20ರಷ್ಟು, ಅಂದರೆ ಸುಮಾರು 60 ಕೋಟಿ ರೂಪಾಯಿಗಳು.

ಯೋಗದ ಪುಸ್ತಕ ಮತ್ತು ಸಿಡಿಗಳ ಮಾರಾಟದಿಂದ 10 ಕೋಟಿ ರೂಪಾಯಿ ಆದಾಯವಿದೆ. ದೇಶದ ಮೂಲೆ ಮೂಲೆಗಳಲ್ಲಿ ರಾಮದೇವ್ ಏರ್ಪಡಿಸುವ ವಿಶೇಷ ಯೋಗ ತರಬೇತಿ ಶಿಬಿರಗಳಿಂದ ವರ್ಷಕ್ಕೆ ಸುಮಾರು 25 ಕೋಟಿ ರೂಪಾಯಿಗಳು ಹರಿದು ಬರುತ್ತವೆ. ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಮಂದಿಗೆ ಈ ತರಬೇತಿ ನೀಡಲಾಗುತ್ತದೆ. ಒಬ್ಬರಿಗೆ ರಾಮದೇವ್ ಐದು ಸಾವಿರ ರೂಪಾಯಿಗಳನ್ನು ವಿಧಿಸುತ್ತಾರೆ.
(ಮುಂದಿನ ಪುಟ ನೋಡಿ)

PR

ಸಾಧುಗಳಿಂದಲೇ ತನಿಖೆಗೆ ಆಗ್ರಹ...
ಬಾಬಾ ರಾಮದೇವ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅತ್ತ ಸಾಧುಗಳು ಎದ್ದು ನಿಂತಿದ್ದಾರೆ. ರಾಮದೇವ್ ಅವರ ಮೇಲಿನ ಆರೋಪಗಳನ್ನು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾಧುಗಳ ಪ್ರಮುಖ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ ಈ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಗೆ ಪತ್ರ ಬರೆಯಲು ಯೋಚಿಸುತ್ತಿದೆ. ಯೋಗ ಗುರು ರಾಮದೇವ್ ಅವರ ಆಸ್ತಿ-ಪಾಸ್ತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎನ್ನುವುದು ಅವರ ಬೇಡಿಕೆ.

ದಶಕದ ಹಿಂದೆ ರಾಮದೇವ್ ಸೈಕಲ್‌ ತುಳಿಯುತ್ತಿದ್ದರು. ತನ್ನ ಸೈಕಲ್ಲಿನ ಪಂಕ್ಚರ್ ಆದ ಟೈರನ್ನು ರಿಪೇರಿ ಮಾಡಿಸಲು ಕೂಡ ಅವರಲ್ಲಿ ಹಣವಿರಲಿಲ್ಲ. ಈಗ ಅವರು ಹೆಲಿಕಾಪ್ಟರಿನಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ರಾಮದೇವ್ ಆಶ್ರಮದ ಆದಾಯ ಮತ್ತು ಆಸ್ತಿಗಳ ಕುರಿತು ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಅಖಾಡ ಪರಿಷತ್ ರಾಷ್ಟ್ರೀಯ ವಕ್ತಾರ ಬಾಬಾ ಹಠಯೋಗಿ ಆಗ್ರಹಿಸಿದ್ದಾರೆ.

ಉತ್ತರಾಖಂಡ ಕ್ರಾಂತಿ ದಳ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ರಾಮದೇವ್ ಅವರು ತನ್ನ ಅಕ್ರಮ ಆಸ್ತಿಯನ್ನು ಮುಚ್ಚಿಡಲು ಕಪ್ಪುಹಣದ ಬಗ್ಗೆ ಅರಚುತ್ತಿದ್ದಾರೆ. ತನ್ನ ಕಪ್ಪುಹಣವನ್ನು ರಕ್ಷಿಸುವ ಸಲುವಾಗಿಯೇ ಅವರು ರಾಜಕೀಯಕ್ಕೆ ಬರುವ ಯೋಚನೆಯಲ್ಲಿದ್ದಾರೆ ಎಂದು ಕ್ರಾಂತಿ ದಳದ ಅಧ್ಯಕ್ಷ ತ್ರಿವೇಂದ್ರ ಪನ್ವಾರ್ ಆರೋಪಿಸಿದ್ದಾರೆ.
(ಮುಂದಿನ ಪುಟ ನೋಡಿ)

PR

ಕಾಂಗ್ರೆಸ್ ಕುತಂತ್ರ?
ಬಾಬಾ ರಾಮದೇವ್ ಅವರು ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬದ ಅಕ್ರಮಗಳ ಬಗ್ಗೆ ಮಾತನಾಡಿದ್ದೇ ಇದಕ್ಕೆ ಕಾರಣ. ಹಾಗೆ ಮಾತಿಗಿಳಿದವರನ್ನು ಕಾಂಗ್ರೆಸ್ ಇದೇ ರೀತಿಯ ಹಣಿಯುತ್ತಾ ಬಂದಿದೆ ಎಂದು ರಾಮದೇವ್ ಅನುಯಾಯಿಗಳು ಆರೋಪಿಸಿದ್ದಾರೆ.

ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ರಾಮದೇವ್, ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಪ್ಪುಹಣವನ್ನು ಯಾಕೆ ಭಾರತಕ್ಕೆ ತರುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಕಾಂಗ್ರೆಸ್ ಸಂಸದನೊಬ್ಬ ವೇದಿಕೆಯಲ್ಲೇ ರಾಮದೇವ್ ಅವರನ್ನು ನಾಯಿ ಮತ್ತು ಬ್ಲಡಿ ಇಂಡಿಯನ್ ಎಂದು ಜರೆದಿದ್ದ.

ತನ್ನ ಆಸ್ತಿಗಳ ಕುರಿತು ತನಿಖೆ ನಡೆಸಬೇಕು ಎಂಬ ಒತ್ತಾಯಗಳಿಗೆ ಪ್ರತಿಕ್ರಿಯಿಸಿರುವ ರಾಮದೇವ್, ನಾನು ದೇಶಭಕ್ತ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ. ಈ ಹಿಂದೆಯೂ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ನನ್ನ ಸಂಸ್ಥೆಯನ್ನು ತನಿಖೆಗೊಳಪಡಿಸಿವೆ. ಎಲ್ಲವೂ ಸರಿಯಾಗಿದ್ದವು. ಈಗಲೂ ಅಷ್ಟೆ. ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.

ಪತಂಜಲಿ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಕೂಡ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಶ್ರಮದ ಎಲ್ಲಾ ದಾಖಲೆಗಳು ಸ್ವಚ್ಛವಾಗಿವೆ, ಪಾರದರ್ಶಕವಾಗಿವೆ. ಹರಿದ್ವಾರದಲ್ಲಿ ಪ್ರಮುಖ ಕೇಂದ್ರವನ್ನು ಹೊಂದಿರುವುದು, ಆಸ್ತಿ ಇರುವುದು ಹೌದು. ಇದನ್ನು ಯಾವುದೇ ತನಿಖೆಗೆ ಒಳಪಡಿಸುವುದಾದರೆ ಸ್ವಾಗತ. ನಮ್ಮ ಸಂಸ್ಥೆಯ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸುವವರು ಗಾಂಧಿ ಕುಟುಂಬವು ನಡೆಸುತ್ತಿರುವ ಸಂಸ್ಥೆಗಳ ತನಿಖೆಗೂ ಒತ್ತಾಯಿಸಬೇಕು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ