ಲಾಟರಿ ಹಗರಣ: ಚಿದಂಬರಂಗೆ ಹೈಕೋರ್ಟ್ ನೋಟೀಸ್

ಬುಧವಾರ, 9 ಮಾರ್ಚ್ 2011 (12:29 IST)
WD
ನರೇಂದ್ರ ಮೋದಿಗೆ, ಆಡ್ವಾಣಿಗೆ, ವರುಣ್ ಗಾಂಧಿಗೆ ಮತ್ತಿತರರಿಗೆ ನ್ಯಾಯಾಲಯವು ನೋಟೀಸ್ ನೀಡಿರುವುದನ್ನೂ, ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿರುವುದನ್ನೂ ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಕಷ್ಟು ಕಂಡಿದ್ದೇವೆ, ಕೇಳಿದ್ದೇವೆ. ಕೇಂದ್ರ ಗೃಹ ಸಚಿವರಿಗೇ ಕೇರಳ ಹೈಕೋರ್ಟ್ ನೋಟೀಸ್ ನೀಡಿರುವ ಪ್ರಕರಣ ಅಪರೂಪದ್ದು.

ಭೂತಾನ ಸರಕಾರ ಮತ್ತು ಸಿಕ್ಕಿಂ ರಾಜ್ಯಗಳಿಂದ ಭಾರತದಾದ್ಯಂತ ವಿತರಿಸಲಾದ ಲಾಟರಿಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ, ಈ ಲಾಟರಿಯ ಪ್ರೋತ್ಸಾಹಕರ ಪರವಾಗಿ ವಕಾಲತ್ತು ಮಾಡುತ್ತಿದ್ದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಕೇಂದ್ರ ಸರಕಾರ, ಸಿಬಿಐ ಮತ್ತು ಕೇರಳ ರಾಜ್ಯ ಸರಕಾರಗಳಿಗೆ ಹೈಕೋರ್ಟ್‌ನ ಕೊಚ್ಚಿ ಪೀಠವು ನೋಟೀಸ್ ಜಾರಿಗೊಳಿಸಿದೆ.

ಸಿಕ್ಕಿಂ ಮತ್ತು ಭೂತಾನ ಲಾಟರಿಗಳು 1998ರಿಂದೀಚೆಗೆ ಪ್ರೊಮೋಟರ್‌ಗಳ ಮೂಲಕ ದೇಶಾದ್ಯಂತ ಮುದ್ರಣಗೊಂಡು ಮಾರಾಟವಾಗುತ್ತಿದ್ದು, ಸಿಕ್ಕಿಂ ಮತ್ತು ಭೂತಾನ ಸರಕಾರಗಳಿಗೆ ಈ ವಿಷಯವೇ ಗೊತ್ತಿರಲಿಲ್ಲ ಮತ್ತು ಅವುಗಳ ಸಮ್ಮತಿಯೂ ಇರಲಿಲ್ಲ. ಈ ಲಾಟರಿಗಳು ಅಸಲಿಯಲ್ಲ ಮತ್ತು ಖೋಟಾ ಎಂದು ತಿಳಿದಿದ್ದೇ ಅವುಗಳನ್ನು ಮಾರಲಾಗುತ್ತಿತ್ತು ಎಂದು ಅರ್ಜಿದಾರ ಕೆ.ಎಂ.ಶಿವನ್‌ಕುಟ್ಟಿ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು.

ಚಿದಂಬರಂ ಅವರು ಫೋರ್ಜರಿ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿರುವ ಈ ಲಾಟರಿಯ ಪ್ರೊಮೋಟರ್‌ಗಳ ಪರವಾಗಿ ಹಿಂದೆ ವಕಾಲತ್ತು ನಡೆಸಿದ್ದರು. ಇದಲ್ಲದೆ, ಅವರು ಜನಸೇವಕನಾಗಿ ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಪ್ರೊಮೋಟರ್‌ಗಳಿಗೆ ಹಣಕಾಸಿನ ಲಾಭ ದೊರಕಿಸಿಕೊಟ್ಟಿದ್ದಾರೆ ಮತ್ತು ಈ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೇರಳದ ಲಾಟರಿ ಹಗರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೇರಳದ ಎಡರಂಗದ ಮುಖ್ಯಮಂತ್ರಿ, ವಿ.ಎಸ್.ಅಚ್ಯುತಾನಂದನ್ ಅವರು ಹಲವಾರು ಬಾರಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೇಂದ್ರದ ನಿಲುವೇನು ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ನಿಗದಿಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ