ಸ್ಟಾಲಿನ್ ನನ್ನ ರಾಜಕೀಯ ಉತ್ತರಾಧಿಕಾರಿ: ಕರುಣಾನಿಧಿ

ಬುಧವಾರ, 30 ಮಾರ್ಚ್ 2011 (10:50 IST)
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಮತ್ತೊಮ್ಮೆ ಸ್ಪಷ್ಟವಾಗಿ ಉತ್ತರ ಬಂದಿದೆ. ನನ್ನ ಮೂರನೇ ಮಗ ಎಂ.ಕೆ. ಸ್ಟಾಲಿನ್ ಡಿಎಂಕೆ ನೇತೃತ್ವ ವಹಿಸಿಕೊಳ್ಳಲಿದ್ದಾನೆ ಎಂದು 'ಕಲೈಂಜ್ಞಾರ್' ವಿಧಾನಸಭಾ ಚುನಾವಣೆಗೂ ಮೊದಲೇ ಪ್ರಕಟಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಕರುಣಾನಿಧಿ, ತನ್ನ ಕಿರಿಯ ಪುತ್ರ ಸ್ಟಾಲಿನ್ ಡಿಎಂಕೆ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾನೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ಪಕ್ಷದ ಹಿರಿಯರು ಸ್ಟಾಲಿನ್ ಮೇಲೂ ವಿಶ್ವಾಸ ಹೊಂದಿದ್ದಾರೆ ಎಂದರು.

ಡಿಎಂಕೆಯಲ್ಲಿ ಬಹುಕಾಲದಿಂದ ಬೆಳೆಯುತ್ತಾ ಬಂದಿರುವ ಸ್ಟಾಲಿನ್ ಸ್ಥಾನದ ಬಗ್ಗೆ ಯಾರಲ್ಲೂ ಸಂಶಯಗಳಿಲ್ಲ. ಈ ಕುರಿತು ಯಾವುದೇ ಪ್ರಶ್ನೆಗಳು ಉಳಿದಿಲ್ಲ. ನಾನು ಅಣ್ಣಾದೊರೈ ಅವರ ನಿರೀಕ್ಷೆಗಳನ್ನು ಸಾರ್ವಜನಿಕ ಜೀವನದಲ್ಲಿ ನಿಜವಾಗಿಸುತ್ತಾ ಬಂದಿರುವಂತೆ, ಸ್ಟಾಲಿನ್ ಕೂಡ ತನ್ನ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾನೆ ಎಂದು ಕರುಣಾನಿಧಿ ತಿಳಿಸಿದರು.

ಡಿಎಂಕೆಯ ಎಲ್ಲರೂ ಸ್ಟಾಲಿನ್ ಅವರನ್ನೇ ಉತ್ತರಾಧಿಕಾರಿಯನ್ನಾಗಿ ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ, 'ಡಿಎಂಕೆ ಎನ್ನುವುದು ಪ್ರಜಾಪ್ರಭುತ್ವ ಹೊಂದಿರುವ ಪಕ್ಷ. ನಮ್ಮ ಪಕ್ಷವು ಮಠವಲ್ಲ, ಉತ್ತರಾಧಿಕಾರಿ ಯಾರೆಂಬುದನ್ನು ಯಾವುದೇ ಧರ್ಮಗುರು ಆಯ್ಕೆ ಮಾಡುವುದಲ್ಲ. ಜನತೆ ತಮ್ಮ ನಾಯಕರನ್ನು ಯಾವ ರೀತಿಯಲ್ಲಿ ಆರಿಸುತ್ತಾರೋ, ಅದೇ ರೀತಿಯಲ್ಲಿ ಪಕ್ಷದಲ್ಲೂ ನಡೆಯುತ್ತದೆ' ಎಂದರು.

ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ಮತ್ತು ಸ್ಟಾಲಿನ್ ನಡುವೆ ಉತ್ತರಾಧಿಕಾರಕ್ಕೆ ಸಂಬಂಧಪಟ್ಟಂತೆ ಸಂಘರ್ಷಗಳಿದ್ದು, ಇದೇ ಹಿನ್ನೆಲೆಯಲ್ಲಿ ಡಿಎಂಕೆ ವರಿಷ್ಠ ತನ್ನ ಹೇಳಿಕೆಯನ್ನು ಹಲವಾರು ಬಾರಿ ಬದಲಿಸುತ್ತಾ ಬಂದಿದ್ದಾರೆ.

ಈ ಹಿಂದೆಯೂ ಕೂಡ, ಸ್ಟಾಲಿನ್ ತನ್ನ ಉತ್ತರಾಧಿಕಾರಿ ಎಂದು ಕರುಣಾನಿಧಿ ಹೇಳಿದ್ದರು. ಆದರೆ ಇದಕ್ಕೆ ಅಳಗಿರಿಯಿಂದ ತೀವ್ರ ವಿರೋಧ ವ್ಯಕ್ತವಾದ ನಂತರ, ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದರು. ತಾನು ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಪ್ರಸಕ್ತ ಕರುಣಾನಿಧಿಯಿಂದ ಬಂದಿರುವ ಹೇಳಿಕೆ ಡಿಎಂಕೆ ಒಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಕೇಂದ್ರ ಸಚಿವರಾಗಿರುವ ಅಳಗಿರಿ ಕೆಲ ದಿನಗಳ ಹಿಂದಷ್ಟೇ ರಾಜೀನಾಮೆ ಪ್ರಹಸನ ನಡೆಸಿದ್ದರು. ಈಗ ಬೇರೆ ಇನ್ಯಾವುದೋ ರೀತಿಯಲ್ಲಿ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ