ಹಿಂದುತ್ವ ಅಜೆಂಡಾ-ಬಿಜೆಪಿ ನೈಜ ಮುಖ ಬಯಲು: ಕಪಿಲ್ ಸಿಬಲ್

ಸೋಮವಾರ, 28 ಮಾರ್ಚ್ 2011 (17:42 IST)
PTI
ವಿಕಿಲೀಕ್ಸ್ ಮಾಹಿತಿ ಸ್ಫೋಟದಿಂದ ಕಾಂಗ್ರೆಸ್ ಮುಜುಗರಕ್ಕೊಳಗಾದ ಬೆನ್ನಲ್ಲೇ ಇದೀಗ ಬಿಜೆಪಿಯ ಸರದಿ. ಹಿಂದುತ್ವ ಎಂಬುದು ಅವಕಾಶವಾದದ ಸಾಧನ ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅಭಿಪ್ರಾಯಕ್ಕೆ ಕಾಂಗ್ರೆಸ್ ಕಟುವಾಗಿ ಟೀಕಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ಹಿಂದುತ್ವದ ರಕ್ಷಕನೆಂಬ ಫೋಸು ಕೊಡುತ್ತಿದ್ದ ಬಿಜೆಪಿಯ ನಿಜವಾದ ಮುಖ ಬಯಲಾಗಿದೆ. ಹಾಗಾಗಿ ಬಿಜೆಪಿ ದೇಶದ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಮುಖಂಡ, ಟೆಲಿಕಾಂ ಸಚಿವ ಕಲಿಲ್ ಸಿಬಲ್ ಒತ್ತಾಯಿಸಿದ್ದಾರೆ.

ಹಿಂದುತ್ವವನ್ನು ಕೇವಲ ಅವಕಾಶವಾದದ ಸಾಧನವಾಗಿ ಬಳಸುತ್ತಿದ್ದೇವೆ ಎಂದು ಹೇಳಿರುವುದು ಗಂಭೀರವಾದ ವಿಚಾರ. ಹಾಗಾದರೆ ಅರುಣ್ ಜೇಟ್ಲಿಯ ವಿಚಾರದ ಬಗ್ಗೆ ಏನು ಹೇಳುತ್ತೀರಿ ಎಂದು ಅಡ್ವಾಣಿ ಮತ್ತು ಆರ್ಎಸ್ಎಸ್ ರಾಷ್ಟ್ರಕ್ಕೆ ತಿಳಿಸಬೇಕೆಂದು ಅವರು ಹೇಳಿದರು.
ರಾಜ್ಯಸಭೆಯ ವಿಪಕ್ಷ ನಾಯಕನಾಗಿರುವ ಜೇಟ್ಲಿ ಹಿಂದುತ್ವವನ್ನು ಕೇವಲ ಅವಕಾಶವಾದದ ಸಾಧನವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿರುವುದು ತುಂಬಾ ಗಂಭೀರವಾದ ವಿಷಯ ಎಂದರು.

ಹಿಂದುತ್ವವನ್ನು ಅವಕಾಶಕ್ಕಾಗಿಯೇ ಬಳಸಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಹೇಳುವುದೊಂದು ಮಾಡುವುದು ಇನ್ನೊಂದು ಎಂದು ಕಿಡಿಕಾರಿದ ಸಿಬಲ್, ಇದರಿಂದಾಗಿ ಬಿಜೆಪಿಯ ದ್ವಿಮುಖ ನೀತಿ ಜಗಜ್ಜಾಹೀರಾಗಿದೆ ಎಂದು ವಾಗ್ದಾಳಿ ನಡೆಸಿದರು. ಏತನ್ಮಧ್ಯೆ ಕಾಂಗ್ರೆಸ್ ವಾಗ್ದಾಳಿಗೆ ತಿರುಗೇಟು ನೀಡಿರುವ ಬಿಜೆಪಿ, ಭ್ರಷ್ಟಾಚಾರದ ಹಡಗಿನಿಂದ ಕಾಂಗ್ರೆಸ್ ಅವಧಿ ಮುಗಿದು ಹೋದ ಆರೋಪಗಳ ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ