ಹೆಚ್ಚು ಅಂಕ ಬೇಕಿದ್ದರೆ ಸೆಕ್ಸ್: ವಿವಿಯಲ್ಲೊಂದು ಕಾಮಕಾಂಡ

ಶುಕ್ರವಾರ, 4 ಮಾರ್ಚ್ 2011 (11:06 IST)
ಅಂಕಗಳಿಗಾಗಿ ಸೆಕ್ಸ್! ಇದು ಕಾಲೇಜು ಕ್ಷೇತ್ರದಲ್ಲಿನ ಕಾಮಕಾಂಡ. ಹೌದು. ಇಂಥದ್ದೊಂದು ಆರೋಪ ಜಬಲ್ಪುರ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿದ್ದು, ಈ ಸಂಬಂಧ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ.

ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿಯಂತ್ರಣಾಧಿಕಾರಿ ಪ್ರೊಫೆಸರ್ ಎಸ್.ಎಸ್.ರಾಣಾ ಮತ್ತು ಉಪ ಕುಲಸಚಿವ ಆರ್.ಎಸ್.ಕಕೋಡಿಯಾ ಅವರೇ ಬಂಧಿತರಾದವರು. ಇದೇ ಪ್ರಕರಣದಲ್ಲಿ ಹಿಂದೆ ಪೊಲೀಸರು ರಾಜು ಖಾನ್ ಎಂಬಾತನನ್ನು ಬಂಧಿಸಿದ್ದರು.

ಇನ್ನಿಬ್ಬರು ಆರೋಪಿಗಳಾದ ವಿದ್ಯಾರ್ಥಿನಿ ಪ್ರೇರಣಾ ಅಟ್ವಾಳ್ ಮತ್ತು ಅಜಯ್ ಖಂಡೇಲ್ವಾಲ್ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಭೋಸ್ ವೈದ್ಯಕೀಯ ಕಾಲೇಜಿನ ಎಂಬಿಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿನಿ ಎಸ್.ಆರ್ಯ ಎಂಬವರು ಕಳೆದ ತಿಂಗಳು ಈ ಕುರಿತು ದೂರು ದಾಖಲಿಸಿದ್ದರು. ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕಗಳು ದೊರೆಯಬೇಕಿದ್ದರೆ ತಾನು ಖಾನ್ ಜೊತೆ ಮಲಗಬೇಕಾಗುತ್ತದೆ ಎಂದು ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿದ್ದ ಪ್ರೇರಣಾ ತನಗೆ ಸೂಚಿಸಿದ್ದಳು ಎಂದು ಆರ್ಯ ದೂರಿದ್ದಾರೆ.

ಖಾನ್‌ಗೆ ವಿವಿ ಜೊತೆ ಒಳ್ಳೆಯ ಪ್ರಭಾವೀ ಸಂಪರ್ಕವಿದೆ ಎಂದಿದ್ದ ಪ್ರೇರಣಾ, ನೀನು ಎರಡು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದೀ ಎಂದೂ ಹೇಳಿರುವುದಾಗಿ ದೂರಿನಲ್ಲಿ ಆರ್ಯ ತಿಳಿಸಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಎಂಬಿಬಿಎಸ್ ಪದವಿ ಪರೀಕ್ಷೆಯ ಎಲ್ಲ ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ