ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ದೇಶದ ಹೆಣ್ಣು ಮಕ್ಕಳಿಗೆ ಉಡುಗೊರೆ ನೀಡಿದ್ದಾರೆ. ಶಾಲೆಗೆ ಹೋಗಲು ಲೋಕಲ್ ರೈಲು ಬಳಸುವ ಹೆಣ್ಣು ಮಕ್ಕಳಿಗೆ ಉಚಿತ ಮಾಸಿಕ ಪಾಸ್ ನೀಡಲಾಗುತ್ತದೆ. ಈ ಕೊಡುಗೆಯು ಕಾಲೇಜು ಮಟ್ಟದವರೆಗೆ ಲಭ್ಯವಿರುತ್ತದೆ.
ರಾಜ್ಯಸಭೆಯಲ್ಲಿ ಮಂಗಳವಾರ ಈ ವಿಷಯ ಘೋಷಿಸಿದ ಬ್ಯಾನರ್ಜಿ, ರೈಲ್ವೇ ಬಜೆಟ್ 2011-12ರ ಮೇಲಿನ ಚರ್ಚೆಗೆ ಮಂಗಳ ಹಾಡಿದರು. ಇದರೊಂದಿಗೆ, ಹೆಣ್ಣು ಮಕ್ಕಳಿಗಾಗಿ ರಜಾ ಕಾಲದ ತರಬೇತಿ ಕೇಂದ್ರಗಳನ್ನು ರಚಿಸುವುದಾಗಿಯೂ ರಾಜ್ಯಸಭೆಯಲ್ಲಿ ಘೋಷಿಸಿದರು.
ರೈಲ್ವೇ ಬಜೆಟ್‌ಗೆ ಮೇಲ್ಮನೆಯೂ ಅಂಗೀಕಾರ ನೀಡಿರುವುದರೊಂದಿಗೆ ಸಂಸತ್ತಿನ ಅನುಮೋದನೆ ದೊರೆತಂತಾಗಿದೆ. ಯಾವುದೇ ಪ್ರಯಾಣ ಅಥವಾ ಸರಕು ಸಾಗಾಟ ದರ ಏರಿಕೆಯಿಲ್ಲದ ರೈಲ್ವೇ ಬಜೆಟ್‌ಗೆ ಲೋಕಸಭೆಯು ಈ ಮೊದಲೇ ಅಂಗೀಕಾರ ನೀಡಿತ್ತು.
ರೈಲ್ವೇ ಸಚಿವರ ಈ ಕೊಡುಗೆಯು ಪಟ್ಟಣ ಕೇಂದ್ರಿತವಾಗಿರುವಂತೆ ತೋರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಲೋಕಲ್ ರೈಲುಗಳಿಲ್ಲದಿರುವುದು ಬಡ ಗ್ರಾಮೀಣ ಹೆಣ್ಣು ಮಕ್ಕಳಿಗೆ ನಿರಾಸೆಯ ಸಂಗತಿಯೂ ಹೌದು.