2ಜಿ-ದಾವೂದ್ ಸಂಬಂಧ ಗೊತ್ತಿದ್ದರೂ ಸುಮ್ಮನಿದ್ದ ಚಿದಂಬರಂ?

ಶನಿವಾರ, 26 ಮಾರ್ಚ್ 2011 (13:07 IST)
ಎರಡನೇ ತಲೆಮಾರಿನ ಮೊಬೈಲ್ ತರಂಗಾಂತರ ಹಂಚಿಕೆ ಹಗರಣದ ಪ್ರಮುಖ ಶಂಕಿತರಲ್ಲಿ ಒಬ್ಬನಾಗಿರುವ ಶಾಹಿದ್ ಬಲ್ವಾನಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಇರುವುದು ಪಿ. ಚಿದಂಬರಂ ಅವರ ಕೇಂದ್ರ ಗೃಹ ಸಚಿವಾಲಯಕ್ಕೆ ಗೊತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಅಂಶ ಬಹಿರಂಗವಾಗಿದೆ.

2ಜಿ ಹಗರಣದಲ್ಲಿ ಚಿದಂಬರಂ ಪಾಲೂ ಇದೆ ಎಂದು ಇತ್ತೀಚೆಗಷ್ಟೇ ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿಯವರು (2ಜಿ ಹಗರಣ ಬಯಲಾಗುವಲ್ಲಿ ಶ್ರಮಿಸಿದ ಪ್ರಮುಖ) ಆರೋಪಿಸಿದ ನಂತರ ಇದು ಮತ್ತಷ್ಟು ಖಚಿತವಾಗುವ ದಾಖಲೆಗಳು ಗೃಹ ಸಚಿವಾಲಯದಿಂದಲೇ ಲಭ್ಯವಾಗಿವೆ.

ಈ ಮಾಹಿತಿಯನ್ನು ಬಹಿರಂಗ ಮಾಡಿರುವುದು 'ವೆಬ್‌ದುನಿಯಾ'ದ ಸಹೋದರ ಸಂಸ್ಥೆ 'ನ್ಯೂಸ್ ಎಕ್ಸ್' ಆಂಗ್ಲ ಸುದ್ದಿವಾಹಿನಿ.

ಭಾರತದ ಮೇಲೆ ಆಗಾಗ ದಾಳಿಗಳನ್ನು ಮಾಡುತ್ತ, ಸಂಚು ರೂಪಿಸುತ್ತಾ ಬಂದಿರುವ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಜತೆ ಬಲ್ವಾ ನಿಕಟ ಸಂಬಂಧ ಹೊಂದಿದ್ದ. ಭೂಗತ ದೊರೆ ದಾವೂದ್ ಇಬ್ರಾಹಿಂ ಜತೆಗೂ ವ್ಯವಹಾರವಿತ್ತು ಎಂಬ ಬಗ್ಗೆ ಗುಪ್ತಚರ ಇಲಾಖೆಯಲ್ಲಿ ಸ್ಪಷ್ಟ ಪುರಾವೆಗಳಿದ್ದವು. ಆದರೂ 2011ರ ಫೆಬ್ರವರಿ 8ರವರೆಗೆ ಬಲ್ವಾ ವಿರುದ್ಧ ಕ್ರಮಕ್ಕೆ ಕೇಂದ್ರ ಮುಂದಾಗಿರಲಿಲ್ಲ.

2009ರಿಂದಲೇ ಶಾಹಿದ್ ಬಲ್ವಾನನ್ನು ಗುಪ್ತಚರ ಇಲಾಖೆಯು ಹದ್ದುಗಣ್ಣಿನಲ್ಲಿಟ್ಟಿತ್ತು. ಬಲ್ವಾ ಮಾಡುತ್ತಿದ್ದ ದೂರವಾಣಿ ಕರೆಗಳೇ ಇದಕ್ಕೆ ಕಾರಣ. ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಜತೆ ಕುಖ್ಯಾತ ಹವಾಲಾ ಜಾಲದ ವ್ಯಕ್ತಿಯೊಬ್ಬ ಹೊಂದಿದ್ದ ಸಂಬಂಧದ ಬಗ್ಗೆ ಗುಪ್ತಚರ ಇಲಾಖೆಯು ಗಮನವಿಟ್ಟಿದ್ದ ಸಂದರ್ಭದಲ್ಲಿ ಬಲ್ವಾ ಸಂಬಂಧ ಬಹಿರಂಗವಾಗಿತ್ತು.

'ಎಟಿಸಲಾಟ್ ಡಿಬಿ ಟೆಲಿಕಾಮ್ ಪ್ರೈವೆಟ್ ಲಿಮಿಟೆಡ್ ಮುಂಬೈ' ಕಂಪನಿಯ ನಿರ್ದೇಶಕರಲ್ಲಿ ಒಬ್ಬನಾಗಿರುವ ಶಾಹಿದ್ ಉಸ್ಮಾನ್ ಬಲ್ವಾ ತರಂಗಾಂತರ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲನೆ ನಡೆಸಿದ ನಂತರ 18-10-2010ರಂದು ಗುಪ್ತಚರ ಇಲಾಖೆಯು ಕೆಳಗಿನಂತೆ ಮಾಹಿತಿ ನೀಡಿತ್ತು.

'ಶಾಹಿದ್ ಬಲ್ವಾ ಮತ್ತು ಆತನ ತಂದೆ ಉಸ್ಮಾನ್ ಬಲ್ವಾರಿಗೆ ಕಳೆದ ಕೆಲವು ವರ್ಷಗಳಿಂದ ಛೋಟಾ ಶಕೀಲ್ ಜತೆ ಸಂಬಂಧವಿದೆ ಎನ್ನುವುದು 2008ರಲ್ಲಿ ನಮಗೆ ಗೊತ್ತಾಗಿದೆ. ಆತ ಮಾತ್ರವಲ್ಲ, ಆತನ ಕಂಪನಿಯ ಪಾಲುದಾರರಾದ ವಿನೋದ್, ಪ್ರಮೋದ್ ಗೋಯೆಂಕಾ ಕೂಡ ದಾವೂದ್ ಇಬ್ರಾಹಿಂ ಜತೆ ಸಂಬಂಧ ಬೆಳೆಸಿಕೊಂಡಿದ್ದಾರೆ'

ಯಾಕೆ ಸುಮ್ಮನಿದ್ದರು ಚಿದಂಬರಂ?
ಸುಬ್ರಮಣ್ಯನ್ ಸ್ವಾಮಿ ಆರೋಪಿಸಿರುವ ಪ್ರಕಾರ, ಶಾಹಿತ್ ಬಲ್ವಾನ ಎಟಿಸಲಾಟ್ ಕಂಪನಿಗೆ ಪಾಕಿಸ್ತಾನದ ಐಎಸ್ಐ ಮತ್ತು ದಾವೂದ್ ಇಬ್ರಾಹಿಂ ಜತೆಗಿನ ಸಂಬಂಧ ಆಗ ವಿತ್ತ ಸಚಿವರಾಗಿದ್ದ ಚಿದಂಬರಂಗೆ ತಿಳಿದಿತ್ತು. ಆದರೂ ಇದನ್ನು ಆಗಿನ ದೂರಸಂಪರ್ಕ ಸಚಿವ ರಾಜಾರಿಗೆ ಚಿದಂಬರಂ ಹೇಳಿರಲಿಲ್ಲ. ಬಳಿಕ ಗೃಹಸಚಿವನಾದ ಮೇಲೂ ಈ ಮಾಹಿತಿಯನ್ನು ಗುಪ್ತವಾಗಿಟ್ಟಿದ್ದರು.

ಈಗ 'ನ್ಯೂಸ್ ಎಕ್ಸ್' ಬಹಿರಂಗಪಡಿಸಿರುವ ಮಾಹಿತಿಯೂ ಇದಕ್ಕೆ ಪೂರಕವಾಗಿದೆ. 20-10-2008ರವರೆಗೆ ವಿತ್ತ ಸಚಿವರಾಗಿದ್ದ ಚಿದಂಬರಂ, 30-10-2008ರಂದು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲೇ ಗುಪ್ತಚರ ಇಲಾಖೆಯು ಬಲ್ವಾ ಮತ್ತು ದಾವೂದ್ ನಡುವಿನ ಸಂಬಂಧದ ಬಗ್ಗೆ ವರದಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು.

2010ರ ಅಕ್ಟೋಬರ್ ತಿಂಗಳಲ್ಲಿ ಗುಪ್ತಚರ ಇಲಾಖೆಯು ತನ್ನ ವರದಿಯನ್ನು ಚಿದಂಬರಂ ಅವರಿಗೆ ಸಲ್ಲಿಸಿತ್ತು. ಆದರೂ 08-02-2011ರವರೆಗೆ ಶಾಹಿದ್ ಉಸ್ಮಾನ್ ಬಲ್ವಾ ವಿರುದ್ಧ ಯಾವುದೇ ಕ್ರಮವನ್ನು ಕೇಂದ್ರ ಕೈಗೊಂಡಿರಲಿಲ್ಲ.

ಲಷ್ಕರ್ ಭಯೋತ್ಪಾದಕರ ಜತೆ ಸಂಬಂಧ ಹೊಂದಿದ್ದ ಹವಾಲಾ ವ್ಯಕ್ತಿಯ ಜತೆಗಿನ ದೂರವಾಣಿ ಸಂಭಾಷಣೆ ತಿಳಿದ ನಂತರವೂ 2009ರ ನವೆಂಬರ್ ತಿಂಗಳಲ್ಲೇ ಬಲ್ವಾನನ್ನು ಯಾಕೆ ಸರಕಾರ ಬಂಧಿಸಲಿಲ್ಲ? ಬಲ್ವಾನಿಗೆ ರಾಜಕಾರಣಿಯೊಬ್ಬನ ಜತೆ ನಿಕಟ ಸಂಬಂಧ ಹೊಂದಿರುವುದೇ ಗುಪ್ತಚರ ಮಾಹಿತಿ ನಿರ್ಲಕ್ಷ್ಯ ಮಾಡಲು ಕಾರಣವೇ ಮುಂತಾದ ಹಲವು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ವೆಬ್ದುನಿಯಾವನ್ನು ಓದಿ