ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳ ಗಡಿಪಾರು ಮಾಡ್ತಾರಾ?

ಸೋಮವಾರ, 25 ಅಕ್ಟೋಬರ್ 2021 (18:13 IST)
ಹೊಸದಿಲ್ಲಿ : 72 ರೋಹಿಂಗ್ಯಾಗಳು ಬೆಂಗಳೂರು ನಗರದಲ್ಲಿದ್ದು, ಅವರನ್ನು ಗಡಿಪಾರು ಮಾಡುವ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ಕರ್ನಾಟಕ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಅಕ್ರಮ ರೋಹಿಂಗ್ಯಾಗಳನ್ನು ಗಡಿಪಾರು ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 2017 ರಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ರಾಜ್ಯ ಸರಕಾರದಿಂದ ಈ ಪ್ರತಿಕ್ರಿಯೆ ಬಂದಿದೆ.
"ಬೆಂಗಳೂರು ನಗರ ಪೊಲೀಸರು ರೋಹಿಂಗ್ಯಾಗಳನ್ನು ತನ್ನ ವ್ಯಾಪ್ತಿಯ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರಗಳಲ್ಲಿ ಇರಿಸಿಲ್ಲ. ಆದರೆ, ಬೆಂಗಳೂರು ನಗರದಲ್ಲಿ ಗುರುತಿಸಿಕೊಂಡಿರುವ 72 ರೋಹಿಂಗ್ಯಾಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಬೆಂಗಳೂರು ನಗರ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರಕಾರವು ಲಿಖಿತ ಪ್ರತಿಕ್ರಿಯೆಯಲ್ಲಿ ಹೇಳಿದೆ.
ವಕೀಲ ವಿ.ಎನ್ ರಘುಪತಿ ಮೂಲಕ ಆಕ್ಷೇಪಣೆಯ ಹೇಳಿಕೆಯನ್ನು ಸಲ್ಲಿಸಿದ ಸರಕಾರ ಅವರನ್ನು ಗಡೀಪಾರು ಮಾಡುವ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ಹೇಳಿದೆ.
ನಗರದ ಈಶಾನ್ಯ ವಿಭಾಗದಲ್ಲಿ ತಂಗಿರುವ ರೋಹಿಂಗ್ಯಾ ನಿರಾಶ್ರಿತರ ಹೆಸರುಗಳನ್ನೂ ರಾಜ್ಯ ಸರಕಾರ ಕೋರ್ಟ್ ಗೆ ನೀಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೊರತುಪಡಿಸಿ ಈ ಎಲ್ಲಾ ರೋಹಿಂಗ್ಯಾಗಳಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ವೈಯಕ್ತಿಕ ಸಂಖ್ಯೆಗಳನ್ನು ನೀಡಿದ್ದಾರೆ ಎಂದು ಹೇಳಿದೆ.
ಒಳನುಸುಳುವವರು ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆ ಒಡ್ಡಿದೆ ಎಂದು ಉಪಾಧ್ಯಾಯ ವಾದಿಸಿದ್ದಾರೆ. ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ಅಕ್ರಮ ವಲಸಿಗರು ಮತ್ತು ನುಸುಳುಕೋರರನ್ನು ಒಂದು ವರ್ಷದೊಳಗೆ ಗುರುತಿಸಿ,ಬಂಧಿಸಿ ಗಡಿಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ