ವೆಲ್ಲಿಮಲೈಪಟ್ಟಿನಂನಲ್ಲಿರುವ ಕೋವೈ ಕಲೈಮಾಗಲ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಎರಡನೇ ವರ್ಷ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಎನ್. ಲೊಗೆಶ್ವರಿ, ಡ್ರಿಲ್ ತರಬೇತಿಯಲ್ಲಿ ಸಾವನ್ನಪ್ಪಿದ್ದಾಳೆ. ಡ್ರಿಲ್ ತರಬೇತಿಯ ಸಮಯದಲ್ಲಿ ಮಹಡಿ ಮೇಲಿಂದ ಜಿಗಿಯಲು ತನಗೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾಳೆ, ಆದರೆ ತರಬೇತುದಾರನು ಆಕೆಯನ್ನು ಒತ್ತಾಯಮಾಡಿ ತಳ್ಳಿದ್ದಾನೆ. ಈ ಸಂದರ್ಭದಲ್ಲಿ ಮೊದನೇ ಮಹಡಿಯ ಸಜ್ಜಾಗೆ ತಲೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಕ್ಷಣವೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಆಕೆಯ ತಲೆ ಮತ್ತು ಬಲ ಕುತ್ತಿಗೆಗೆ ಬಲವಾದ ಏಟು ಬಿದ್ದಿರುವ ಕಾರಣ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಲೇಜು ಆಡಳಿತವು ಗುರುವಾರ ಬೆಳಿಗ್ಗೆ ಕಾಲೇಜು ಆವರಣದಲ್ಲಿ 'ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ' ಕುರಿತು ತರಬೇತಿ ನೀಡಿತ್ತು. ತುರ್ತು ಕಿಟಕಿಯ ಮೂಲಕ ಜಿಗಿಯಲು 20 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ, ಎರಡನೇ ಮಹಡಿಯಿಂದ ಜಿಗಿಯುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ವಿದ್ಯಾರ್ಥಿಗಳ ಗುಂಪೊಂದು ಬಲೆಯನ್ನು ಹಿಡಿದು ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.