ರಾಯಪುರ: ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ತೆರೆದು, ಛತ್ತೀಸಗಢ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ತಂದಿರುವ 'ಮಹತಾರಿ ವಂದನಾ ಯೋಜನೆ'ಯ ಲಾಭ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಈ ಯೋಜನೆಯಡಿಯಲ್ಲಿ ವಿವಾಹಿತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಸರ್ಕಾರ ₹1 ಸಾವಿರ ಮೊತ್ತವನ್ನು ಜಮಾ ಮಾಡುತ್ತಿದೆ.
ಇದೀಗ ಸನ್ನಿ ಲಿಯೋನ್ ಅವರ ನಕಲಿ ಖಾತೆಯಲ್ಲಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವೀರೇಂದ್ರ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಯೋಜನೆಯ ಅರ್ಹ ಫಲಾನುಭವಿಗಳ ಪರಿಶೀಲನೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದ ಹಾಗೇ, ಎಚ್ಚೆತ್ತ ಜಿಲ್ಲಾಡಳಿತ ವಂಚನೆ ಬಗ್ಗೆ ತನಿಖೆ ಆರಂಭಿಸಿದೆ. ಛತ್ತೀಸಗಢದ ಬಸ್ತಾರ್ ಜಿಲ್ಲೆಯ ತಾಲೂರ್ ಗ್ರಾಮದಲ್ಲಿ ವಂಚನೆ ನಡೆದಿರುವುದು ವರದಿಯಾಗಿದ್ದು, ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್. ಆದೇಶಿಸಿದ್ದಾರೆ.