ನವದೆಹಲಿ : ಪೆಟ್ಟಿಗೆಯೊಂದರಲ್ಲಿ ಸುಮಾರು 30 ಹೆಬ್ಬಾವುಗಳ ಸೇರಿದಂತೆ ಅಪರೂಪದ ಇತರ ಪ್ರಾಣಿಗಳನ್ನು ರೈಲಿನ ಮೂಲಕ ಸಾಗಿಸುತ್ತಿದ್ದ ಮಹಿಳೆ ಅಧಿಕಾರಿಗಳ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಮಹಿಳೆ ಸುಮಾರು 50 ಕೋಟಿ ರೂ. ಬೆಲೆಬಾಳುವ ಪ್ರಾಣಿಗಳನ್ನು ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಅತಿಥಿಯಾಗಿರುವ ಮಹಿಳೆ ಪುಣೆ ಮೂಲದ ದೇವಿ ಚಂದ್ರ ಎಂಬುದು ತಿಳಿದುಬಂದಿದೆ. ಆಕೆ ಖರಗ್ಪುರದ ಹಿಜ್ಲಿಯಿಂದ ದೆಹಲಿಗೆ ನೀಲಾಚಲ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ.
ರಹಸ್ಯ ಮೂಲಗಳಿಂದ ಮಾಹಿತಿ ಪಡೆದ ರೈಲ್ವೇ ಪೊಲೀಸರು ಹಾಗೂ ಅರಣ್ಯ ಇಲಾಖೆಯ ತಂಡ ನೀಲಾಚಲ ಎಕ್ಸ್ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಹಿಳೆ ತಂದಿದ್ದ ಸಾಮಾನ್ಯ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಸಹ ಪ್ರಯಾಣಿಕರು ದಂಗಾಗಿದ್ದಾರೆ.
ಪೆಟ್ಟಿಗೆಯಲ್ಲಿ 30 ಹೆಬ್ಬಾವು, ಜೇಡಗಳು, ಗೋಸುಂಬೆಗಳು, ಜೀರುಂಡೆ ಹೀಗೆ ಅನೇಕ ಜಾತಿಯ ಪ್ರಾಣಿಗಳು ಪತ್ತೆಯಾಗಿವೆ. ಈ ಎಲ್ಲಾ ಪ್ರಾಣಿಗಳೂ ಅತ್ಯಂತ ಅಪರೂಪದ ಪ್ರಭೇದಕ್ಕೆ ಸೇರಿದ್ದಾಗಿದ್ದು, ದುಬಾರಿ ಬೆಲೆಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.