ಬಿಜೆಪಿ ರಾಜ್ಯಸಭೆ ಸದಸ್ಯ ನವಜೋತ್ ಸಿಂಗ್ ಸಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿದ ಆಮ್ ಆದ್ಮಿ ಪಕ್ಷ, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿದ್ದು ಮಹತ್ವದ ಪಾತ್ರ ನಿರ್ವಹಿಸುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದೆ.
ಸಿದ್ದು ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ಆಪ್ ಪಂಜಾಬ್ ರಾಜ್ಯದ ಸಂಚಾಲಕ ಸುಚಾ ಸಿಂಗ್ ಛೋಟೆಪುರ್ ಮತ್ತು ಆಪ್ ಉಸ್ತುವಾರಿ ಹೊತ್ತಿರುವ ಸಂಜಯ್ ಸಿಂಗ್, ಇದೊಂದು ಅಪ್ರತಿಮ ಶೌರ್ಯದ ನಿರ್ಧಾರ. ಪಕ್ಷ ಅವರನ್ನು ಸ್ವಾಗತಿಸಲು ಕಾತುರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನವಜೋತ್ ಸಿಂಗ್ ಸಿದ್ದು ಅವರನ್ನು ಸಿಎಂ ಅಭ್ಯರ್ಥಿಯಾಗಿಸಲಾಗುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಗೂರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ್ ಮಾನ್, ಯಾರೇ ಆಗಲಿ ಆಪ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಬಯಸಿದಲ್ಲಿ ಬೇಷರತ್ತಾಗಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.