ಪ್ರಚಾರಕ್ಕೆ ಅಪ್ರಾಪ್ತರ ಬಳಕೆ ಆರೋಪ: ಅಮಿತ್ ಶಾ, ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್

Sampriya

ಶನಿವಾರ, 4 ಮೇ 2024 (14:51 IST)
Photo Courtesy X
ಹೈದರಾಬಾದ್‌: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಪ್ರಾಪ್ತರನ್ನು ಬಳಸಿದ ಆರೋಪದಡಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಸಂಬಂಧ ತೆಲಂಗಾಣ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ನಿರಂಜನ್ ರೆಡ್ಡಿ ಅವರು, ಮೇ 1 ರಂದು ಲಾಲ್ದವಾಜಾದಿಂದ ಸುಧಾ ಟಾಕೀಸ್‌ವರೆಗೆ ನಡೆದ ಬಿಜೆಪಿಯ ಚುನಾವಣಾ ರ್‍ಯಾಲಿಯಲ್ಲಿ ಕೆಲವು ಅಪ್ರಾಪ್ತರು ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.

ಅದಲ್ಲದೆ ಮಗುವಿನ ಕೈಯಲ್ಲಿ ಬಿಜೆಪಿ ಪಕ್ಷದ ಚಿಹ್ನೆಯನ್ನು ನೀಡಿ ಪ್ರಚಾರ ಮಾಡುವ ಮೂಲಕ ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

ದೂರಿನ ಆಧಾರದ ಮೇಲೆ ವಾಸ್ತವತೆಯನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ನಗರ ಪೊಲೀಸರಿಗೆ ಪ್ರಕರಣವನ್ನು ರವಾಸಿದ್ದರು. ಮೊಘಲ್‌ಪುರ ಪೊಲೀಸ್ ಠಾಣೆಯಲ್ಲಿ ಅಮಿತ್‌ ಶಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪಕ್ಷದ ನಾಯಕರಾದ ಟಿ. ಯಮನ್ ಸಿಂಗ್, ಜಿ. ಕಿಶನ್ ರೆಡ್ಡಿ ಮತ್ತು ಶಾಸಕ ಟಿ. ರಾಜಾ ಸಿಂಗ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ