ಬೆಂಗಳೂರು: ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆಯಲಿದ್ದು, ಎರಡೂ ದಿನಗಳಲ್ಲಿ ಆಯಾ ಪ್ರದೇಶಗಳಲ್ಲಿ ಕಚೇರಿಗಳಿಗೆ ಕಡ್ಡಾಯ ರಜೆ ಕೊಡಬೇಕು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಒಂದು ವೇಳೆ ರಜೆ ಕೊಡದೇ ಇದ್ದರೆ ಅಂತಹ ಕಂಪನಿಗಳ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಈಗಾಗಲೇ ಐಟಿ-ಬಿಟಿ ಕಂಪನಿಗಳು, ಇತರೆ ಖಾಸಗಿ ಕಂಪನಿಗಳನ್ನು ಸಂಪರ್ಕಿಸಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಉದ್ಯೋಗಿಗಳು ಮತ ಚಲಾಯಿಸಲು ತಮ್ಮ ಊರುಗಳಿಗೆ ಹೋಗಲು ಅನುಕೂಲವಾಗುವಂತೆ ರಜೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರ್ಕ್ ಫ್ರಂ ಹೋಂ ಮಾಡುವಂತೆಯೂ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಮತದಾನ ಮಾಡುವಂತೆ ಉದ್ಯೋಗಿಗಳಿಗೆ ಉತ್ತೇಜಿಸಬೇಕು. ಸಾಧ‍್ಯವಾದಲ್ಲಿ ಅವರಿಗೆ ಊರಿಗೆ ತೆರಳಲು ವಾಹನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಈ ಮೊದಲು ಕಡಿಮೆ ಮತದಾನವಾಗಿರುವ ಬಿಬಿಎಂಪಿಯ ವಾರ್ಡ್ ಗಳಿಗೆ ತೆರಳಿ ಈಗ ಮತದಾನ ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ. ಮತದಾನ ಮಾಡುವಂತೆ ಅಪಾರ್ಟ್ ಮೆಂಟ್ ನಿವಾಸಿಗಳನ್ನೂ ಮನವಿ ಮಾಡಲಾಗಿದೆ. ಅಲ್ಲದೆ, ಮಾಲ್, ಥಿಯೇಟರ್ ಗಳಿಗೆ ತೆರಳಿ ಮತದಾನ ಮಾಡಲು ಮನವಿ ಮಾಡಿದ್ದೇವೆ ಎಂದು ಮೀನಾ ಹೇಳಿದ್ದಾರೆ.
ಏಪ್ರಿಲ್ 26 ಮತ್ತು ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಬೆಂಗಳೂರು, ಕರ್ನಾಟಕ ದಕ್ಷಿಣ ಭಾಗದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕದ ಕೆಲವು ಕಡೆ ಮೇ 7 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.