ಪಾಕಿಸ್ತಾನದ ಸೇನಾ ಪಡೆಯ ಗುಂಡಿನ ದಾಳಿಗೆ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಹಲವರಿಗೆ ಗಾಯ

Sampriya

ಶನಿವಾರ, 10 ಮೇ 2025 (11:39 IST)
Photo Courtesy X
ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಸೇನಾ ಸಂಘರ್ಷ ತೀವ್ರಗೊಂಡಿದೆ. ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆಯು ಶನಿವಾರ ತೀವ್ರ ಗುಂಡಿನ ದಾಳಿ ನಡೆಸಿದೆ.

ಪಾಕ್‌ ನಡೆಸಿದ ಗುಂಡಿನ ದಾಳಿಯಲ್ಲಿ ರಜೌರಿಯಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್‌ ಮೃತಪಟ್ಟಿದ್ದು, ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಜೌರಿ ನಗರದಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಪಾಕ್‌ನ ಶೆಲ್ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಅವರು ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಮತ್ತಿಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್‌ಕುಮಾರ್ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸಂತಾಪ ವ್ಯಕ್ತಪಡಿಸಿದ್ದಾರೆ. ರಜೌರಿ ಪಟ್ಟಣವನ್ನು ಗುರಿಯಾಗಿಸಿ ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ನನ್ನ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಮರ್‌ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ

ಇಂದು ನಾವು ಸರ್ಕಾರದ ಆಡಳಿತ ಸೇವೆಗಳ ಸಮರ್ಪಿತ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ರಾಜ್ ಕುಮಾರ್ ಅವರು ಉಪ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಜತೆಗೆ, ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲೂ ಭಾಗವಹಿಸಿದ್ದರು ಎಂದು ಒಮರ್‌ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ಏರಿದೆ. ರಾಜೌರಿ, ಪೂಂಚ್ ಮತ್ತು ಉರಿಯಲ್ಲಿ ಅನೇಕ ವಸತಿ ಮನೆಗಳು ಶೆಲ್ ದಾಳಿಯಲ್ಲಿ ಹಾನಿಗೊಳಗಾದವು. ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಾಶಮಾಡಲು ಭಾರತವು ಆಪರೇಷನ್ ಸಿಂದೂರ್ ಪ್ರಾರಂಭಿಸಿದ ನಂತರ ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿನ ಗಡಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ