ಹಸುವನ್ನು ರಕ್ಷಿಸಲು ಸಿಂಹವನ್ನೇ ಎದುರಿಸಿದ ಅಕ್ಕ-ತಂಗಿ

ಶುಕ್ರವಾರ, 21 ಅಕ್ಟೋಬರ್ 2016 (09:39 IST)
ತಮ್ಮ ಪ್ರೀತಿಯ ಹಸುವನ್ನು ರಕ್ಷಿಸಲು ಹದಿಹರೆಯದ ಸಹೋದರಿಯರಿಬ್ಬರು ಕ್ರೂರ ಪ್ರಾಣಿ ಸಿಂಹವನ್ನೇ ಎದುರಿಸಿ ನಿಜವಾದ ಅರ್ಥದಲ್ಲಿ ಗೋರಕ್ಷಣೆಯನ್ನು ಮಾಡಿದ ಸಾಹಸಮಯ ಘಟನೆ ಅಹಮದಾಬಾದ್‌ ಬಳಿ ನಡೆದಿದೆ. 

ಅಮ್ರೇಲಿ ಜಿಲ್ಲೆಯ ಗಿರ್ ಅಭಯಾರಣ್ಯದ ಮೆಂಧವಾಸ್ ನಿವಾಸಿಗಳಾದ ಸಂತೋಕ್ ರಬರಿ (19) ಮತ್ತು ಆಕೆಯ ತಂಗಿ ಮೈಯಾ ಚಿಕ್ಕಂದಿನಿಂದಲೂ ಅರಣ್ಯದಲ್ಲಿ ದನಗಳನ್ನು ಮೇಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ 10 ವರ್ಷಗಳ ಹಿಂದೆ ತಮ್ಮ ತಂದೆ ಪಾರ್ಶ್ವವಾಯು ಪೀಡಿತರಾದಾಗಿನಿಂದ ಅವರಿಬ್ಬರು ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ. 
 
ಎಂದಿನಂತೆ ಕೆಲ ದಿನಗಳ ಹಿಂದೆ ದನಗಳೊಂದಿಗೆ ಅವರು ಕಾಡಿಗೆ ಹೋಗಿದ್ದರು. ಆ ಸಮಯದಲ್ಲಿ ಸಿಂಹವೊಂದು ದನಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿದೆ. ಸಿಂಹ ಹತ್ತಿರ ಬರುತ್ತಿದ್ದಂತೆ ಸಹೋದರಿಯರು ಕೈಯ್ಯಲ್ಲಿ ಕಟ್ಟಿಗೆ ಹಿಡಿದು ಸಿಂಹ ಮತ್ತು ಆಕಳ ನಡುವೆ ನಿಂತಿದ್ದಾರೆ ಮತ್ತು ಸಿಂಹದ ಕಣ್ಣನ್ನು ದಿಟ್ಟಿಸಿ ನೋಡಿದ್ದಾರೆ. ಸಹೋದರಿಯರ ದಿಟ್ಟತನಕ್ಕೆ ಸಿಂಹವೇ ಹಿಮ್ಮೆಟ್ಟಿದೆ. 
 
ಅಕ್ಕ-ತಂಗಿಯರ ಈ ಸಾಹಸವನ್ನು ಕೇಳಿ ಗ್ರಾಮದಲ್ಲಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಗಿದೆ.
 
ಈ ಕುರಿತು ಪ್ರತಿಕ್ರಿಯಿಸುವ ಸಬೋದರಿಯರು ಸಿಂಹದ ಬಗ್ಗೆ ತಿಳಿದುಕೊಂಡಿದ್ದು ನಮಗೆ ಸಹಾಯಕವಾಯಿತು. ನೀವು ಸಿಂಹಕ್ಕೆ ಬೆನ್ನು ತೋರಿಸಿದರೆ ಅದು ದಾಳಿ ನಡೆಸುತ್ತದೆ. ದೃಢವಾಗಿ ನಿಂತರೆ ಅದು ದಾಳಿ ನಡೆಸುವುದಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ