ವಿಮಾನ ದುರಂತ: ಸಹೋದರನ ಶವಕ್ಕೆ ಹೆಗಲುಕೊಟ್ಟು ಬಿಕ್ಕಿಬಿಕ್ಕಿ ಅತ್ತ ವಿಶ್ವಾಸ್ ರಮೇಶ್ ವಿಡಿಯೊ ಇಲ್ಲಿದೆ

Sampriya

ಬುಧವಾರ, 18 ಜೂನ್ 2025 (16:21 IST)
ಅಹಮದಾಬಾದ್‌: ಕಳೆದ ವಾರ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಪವಾಡಸದೃಷವಾಗಿ ಬದುಕುಳಿದ ಬ್ರಿಟನ್‌ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್‌ ಅವರು ತನ್ನ ಸಹೋದರ ಅಜಯ್‌ ರಮೇಶ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ರೋದಿಸಿದ್ದಾರೆ.

ವಿಮಾನದುರಂತದಲ್ಲಿ ಒಟ್ಟು 270 ಮಂದಿ ಮೃತಪಟ್ಟರೆ, ರಮೇಶ್‌ ಮಾತ್ರ ಬದುಕುಳಿದಿದ್ದರು. ಗಾಯಗೊಂಡಿದ್ದ ಅವರು ಈಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದೇ ದುರಂತದಲ್ಲಿ ಮೃತಪಟ್ಟ ತನ್ನ ಸಹೋದರ ಅಜಯ್‌ ಅವರ ಶವಕ್ಕೆ ಹೆಗಲುಕೊಟ್ಟು ಕಣ್ಣೀರು ಹಾಕಿದ್ದಾರೆ. 

ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬ್ರಿಟನ್‌ನಿಂದ ದಿಯುಗೆ ಬಂದಿದ್ದ ಸಹೋದರರು ಜೂನ್‌ 12ರಂದು ಮರಳಿ ಲಂಡನ್‌ಗೆ ಹೊರಟಿದ್ದರು. ಈ ವೇಳೆ ವಿಮಾನ ಅಪಘಾತ ಸಂಭವಿಸಿತ್ತು.  ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಶ್ವಾಸ್ ಕುಮಾರ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಮಾತನಾಡಿಸಿದ್ದರು.

ಜೂನ್‌ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ (ಎಐ–171) ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲೇ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮತ್ತು ವಿಮಾನ ಬಿದ್ದ ಕಟ್ಟಡದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ. 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಅವರು ಪವಾಡಸದೃಶವಾಗಿ ಪಾರಾಗಿದ್ದರು.

ದಿಯುವಿನಲ್ಲಿ ಬುಧವಾರ ಬೆಳಿಗ್ಗೆ ಅಜಯ್‌ ಅವರ ಅಂತ್ಯಕ್ರಿಯೆ ನಡೆದಿದ್ದು, ವಿಶ್ವಾಸ್ ಕೂಡ ಅಲ್ಲಿ ಹಾಜರಿದ್ದರು ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.


#WATCH | Diu | Lone survivor of AI-171 flight crash, Vishwas Ramesh Kumar, mourns the death of his brother Ajay Ramesh, who was travelling on the same flight

Vishwas Ramesh Kumar is a native of Diu and is settled in the UK. pic.twitter.com/fSAsCNwGz5

— ANI (@ANI) June 18, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ