ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಅಖಿಲೇಶ್

ಭಾನುವಾರ, 22 ಜನವರಿ 2017 (17:14 IST)
ದೇಶದಾದ್ಯಂತ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಅವರ ಪತ್ನಿ ಡಿಂಪಲ್ ಜತೆಗಿದ್ದರು. ಆದರೆ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.
 
ಬಡವರು, ಹಿಂದುಳಿದ ಮತ್ತು ದಲಿತ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯಲ್ಲಿ ಅಖಿಲೇಶ್ ಹಲವು ವಾಗ್ದಾನಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಅಂಶಗಳು ಇಲ್ಲಿವೆ ಓದಿ.
 
* ಬಡವರಿಗೆ ಉಚಿತ ಅಕ್ಕಿ, ಗೋಧಿ 
*ಪ್ರತಿ ಹಳ್ಳಿಗೂ 24ಗಂಟೆ ವಿದ್ಯುತ್
*ಮಹಿಳೆಯರಿಗೆ ಬಸ್ ಪ್ರಯಾಣ ದರದಲ್ಲಿ 50 ಪ್ರತಿಶತ ರಿಯಾಯತಿ
* ರೈತರಿಗೆ ವಿಶೇಷ ಅನುದಾನ
* ಬಡ ಮಹಿಳೆಯರಿಗೆ ಪ್ರೆಸರ್ ಕುಕ್ಕರ್
* ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ 
 
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಪ್ರಧಾನಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಬಾಯಿಮಾತಲ್ಲಿ ಜನರನ್ನು ಮೆಚ್ಚಿಸುತ್ತಾರೆ. ವಿಕಾಸದ ವಾಗ್ದಾನವನ್ನು ಪೂರ್ಣಗೊಳಿಸುತ್ತಿಲ್ಲ. ಬಿಜೆಪಿ ‘ಅಚ್ಚೇ ದಿನ’ ತರುವುದಾಗಿ ನೀಡಿದ್ದ ಭರವಸೆಗಳು ಸುಳ್ಳಾದವು  ಎಂದು ಕಿಡಿಕಾರಿದ್ದಾರೆ. 
 
ಇನ್ನೊಂದೆಡೆ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಇದ್ದ ಗೊಂದಲ ನಿವಾರಣೆಯಾಗಿದ್ದು, ಮೈತ್ರಿ ಖಚಿತವಾಗಿದೆ.
 
ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 105 ಸೀಟುಗಳನ್ನು ಬಿಟ್ಟುಕೊಡಲಾಗಿದೆ, ಎಂದು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿವೆ.ಅಖಿಲೇಶ್ ನೇತೃತ್ವದ ಪಕ್ಷ 298 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. 
 
ಉತ್ತರ ಪ್ರದೇಶದಲ್ಲಿ ಫೆಬ್ರವರಿ 11 (73ಕ್ಷೇತ್ರಗಳು), ಫೆಬ್ರವರಿ 15 (67 ಕ್ಷೇತ್ರಗಳು), ಫೆಬ್ರವರಿ 19 (69), ಫೆಬ್ರವರಿ 23 (53), ಫೆಬ್ರವರಿ 27 (52), ಮಾರ್ಚ್ 3 (49) ಮತ್ತು ಮಾರ್ಚ್ 8 (40) ರಂದು ಒಟ್ಟು 7ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 11 ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ