ಅಖಿಲೇಶ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಶಿವಪಾಲ್ ಹೆಸರು

ಶುಕ್ರವಾರ, 20 ಜನವರಿ 2017 (15:57 IST)
ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಶುಕ್ರವಾರ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಕಣಕ್ಕಿಳಿಸುತ್ತಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡ ಮಾಡಿದ್ದು ಅದರಲ್ಲಿ ರಾಜಕೀಯ ಶತ್ರು, ಚಿಕ್ಕಪ್ಪ ಶಿವಪಾಲ್ ಯಾದವ್ ಹೆಸರು ಕೂಡ ಇದೆ. 

ರಾಜ್ಯದಲ್ಲಿ ಫೆಬ್ರವರಿ 11 ರಿಂದ ಚುನಾವಣೆ ಆರಂಭಗೊಳ್ಳಲಿದ್ದು ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಕಳೆದ ತಿಂಗಳು ತಮ್ಮ ತಂದೆ ಬಿಡುಗಡೆ ಮಾಡಿದ್ದ ಪಟ್ಟಿಯನ್ನೇ ತಿದ್ದಿ ಅಖಿಲೇಶ್ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮುಲಾಯಂ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅತುಲ್ ಪ್ರಧಾನ್, ಅರವಿಂದ ಸಿಂಗ್ ಗೋಪೆ ಸೇರಿದಂತೆ ಅಖಿಲೇಶ್ ಅವರ ಅನೇಕ ಆಪ್ತರ ಹೆಸರುಗಳಿರಲಿಲ್ಲ.
 
ಮೊದಲ ಮೂರು ಹಂತದ ಚುನಾವಣೆಗೆ 191 ಅಭ್ಯರ್ಥಿಗಳ ಹೆಸರುಳ್ಳ ಈ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಶಿವಪಾಲ್ ಜಸ್ವಂತ ನಗರದಿಂದ ಮತ್ತು ಅಜಂ ಖಾನ್ ಈ ಹಿಂದಿನಂತೆ ರಾಂಪುರದಿಂದ ಕಣಕ್ಕಿಳಿಯುತ್ತಿದ್ದಾರೆ.
 
403 ವಿಧಾನಸಭಾ ಕ್ಷೇತ್ರಗಳಲ್ಲಿ 300 ಸೀಟುಗಳನ್ನು ಉಳಿಸಿಕೊಳ್ಳಲಿರುವ ಅಖಿಲೇಶ್ ನೇತೃತ್ವದ ಪಕ್ಷ ಉಳಿದ ಸೀಟುಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದೆ. 
 
ಪಟ್ಟಿಯಲ್ಲಿ ಶಿವಪಾಲ್ ಯಾದವ್ ಹೆಸರು ಸೇರ್ಪಡೆಯಾಗಿರುವುದು ತಂದೆ- ಮಗನ ಸಂಬಂಧ ಸುಧಾರಣೆಯಾಗುವ ಮುನ್ಸೂಚನೆಯನ್ನು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ