ಅಮಿತ್ ಶಾಗೆ ಕೇಜ್ರಿವಾಲ್ ಹೆಸರು ಹೇಳುವ ಯೋಗ್ಯತೆಯೂ ಇಲ್ಲ: ಸಿಸೋಡಿಯಾ

ಶನಿವಾರ, 8 ಅಕ್ಟೋಬರ್ 2016 (16:08 IST)
ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನಡೆದ ಸೀಮಿತ ದಾಳಿಯ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಆಪ್, ಅಮಿತ್ ಶಾ ಅಪರಾಧ ಹಿನ್ನೆಲೆಯ ವ್ಯಕ್ತಿ ಎನ್ನುವುದು ದೇಶಕ್ಕೆ ಗೊತ್ತಿದೆ. ಇದೀಗ ಅವರು ದೇಶಭಕ್ತಿಯ ಪಾಠ ಕಲಿಸುತ್ತಿದ್ದಾರೆ ಎಂದು ಕಿಡಿಕಾರಿದೆ.  
 
ದೇಶಭಕ್ತಿಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಕದಲ್ಲಿ ನಿಲ್ಲಲು ಯೋಗ್ಯತೆ ಇಲ್ಲದ ಅಮಿತ್ ಶಾ ರಾಷ್ಟ್ರಭಕ್ತಿಯ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 
ಅಮಿತ್ ಶಾಗೆ ಯಾವುದೇ ರಾಜಕೀಯ ಮೌಲ್ಯಗಳಿಲ್ಲ. ಕೇಜ್ರಿವಾಲ್ ಹೆಸರನ್ನು ಎತ್ತುವುದಕ್ಕೂ ಯೋಗ್ಯತೆಯಿಲ್ಲ. ಗುಜರಾತ್‌ನಲ್ಲಿ ಹತ್ಯೆ ಆರೋಪಗಳನ್ನು ಎದುರಿಸಿರುವ ಬಗ್ಗೆ ದೇಶಕ್ಕೆ ಗೊತ್ತಿದೆ ಎಂದು ಲೇವಡಿ ಮಾಡಿದೆ. 
 
ಅಪರಾಧ ಹಿನ್ನೆಲೆಯ ವ್ಯಕ್ತಿ ದೇಶಭಕ್ತಿ ಮತ್ತು ಪ್ರಾಮಾಣಿಕತೆಯ ಪ್ರಮಾಣ ಪತ್ರ ವಿತರಿಸುತ್ತಿರುವುದು ಅಚ್ಚರಿ ತಂದಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
 
ಅಮಿತ್ ಶಾ ಸೋಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಹತ್ಯೆ ಆರೋಪಗಳನ್ನು ಎದುರಿಸಿದ್ದರು. ನಂತರ ಡಿಸೆಂಬರ್ 30, 2014ರಲ್ಲಿ ಕೋರ್ಟ್ ನಿರಪರಾಧಿ ಎಂದು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ