ಅಮರಾವತಿ : ಭಾರತ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಪರಿಸರ ಸಂರಕ್ಷಣಾ ಅಭಿಯಾನವನ್ನು ಗುರುತಿಸಿ, ಪೈಲಟ್ ಹಸಿರು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.
ಪರ್ಯಾಯ ವಿದ್ಯುತ್ ಉತ್ಪಾದನೆಗೆ ತಿರುಮಲವನ್ನು ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಲಾಗಿದೆ. ಹಸಿರು ವಿದ್ಯುತ್ ಉತ್ಪಾದನೆಯ ಭವಿಷ್ಯವನ್ನು ಅಧ್ಯಯನ ಮಾಡಲು ತಿರುಮಲಕ್ಕೆ ತಜ್ಞರ ತಂಡವನ್ನು ಶೀಘ್ರವೇ ಕಳುಹಿಸಲಾಗಿವುದು ಎಂದು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಪ್ರತಿನಿಧಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರದಲ್ಲಿ ಅನ್ನ ಪ್ರಸಾದ ತಯಾರಿಗಾಗಿ ಸೌರಶಕ್ತಿ ಬಳಕೆಯ ಬಗ್ಗೆ ಹಾಗೂ ಕಾಕುಳಕೊಂಡದಲ್ಲಿ ಪವನ ವಿದ್ಯುತ್ ಉತ್ಪಾದನೆಯ ಬಗ್ಗೆ ಟಿಟಿಡಿ ಅಧಿಕಾರಿಗಳು ಬಿಇಇ ಅಧಿಕಾರಿಗಳಿಗೆ ವಿವರಿಸಿದರು.
ಟಿಟಿಡಿಯ ಪ್ರಸ್ತಾವನೆಗಳನ್ನು ಅನುಸರಿಸಿ, ಭೇಟಿ ನೀಡುವ ತಜ್ಞರ ಸಮಿತಿಯನ್ನು ಸಮಾಲೋಚಿಸಲಾಗುವುದು. ಬಳಿಕ ಎಲ್ಲಾ ರೀತಿಯ ಆರ್ಥಿಕ, ತಾಂತ್ರಿಕ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಬಿಇಇ ಪ್ರತಿನಿಧಿಗಳು ತಿಳಿಸಿದರು.