ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕಾ, ಚೀನಾ ಮಧ್ಯಸ್ಥಿಕೆಗೆ ಮನವಿ ಮಾಡಬೇಕು: ಫಾರೂಕ್ ಅಬ್ದುಲ್ಲಾ

ಶುಕ್ರವಾರ, 21 ಜುಲೈ 2017 (18:37 IST)
ಶ್ರೀನಗರ:ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಚೀನಾದಂತಹ ದೇಶಗಳನ್ನು ಭಾರತ ಮಧ್ಯಸ್ಥಿಕೆಗಾಗಿ ಬಳಸಿಕೊಳ್ಳಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. 
 
ಸಿಕ್ಕಿಂ ನ ಡೋಕ್‌ಲಾಂ ಗಡಿಯಲ್ಲಿ  ಭಾರತ - ಚೀನ ಇದೀಗ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಗಂಭೀರ ಉದ್ವಿಗ್ನತೆಗೆ ಹಾಗೂ ಸಂಭಾವ್ಯ ಸಮರಕ್ಕೆ ಕಾರಣವಾಗಿರುವ ಈ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಚೀನದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ; ಹಾಗಿರುವಾಗ ಬಹು ದೀರ್ಘ‌ಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಭಾರತ ಪಾಕ್‌ ಜತೆಗೆ ಯಾಕೆ ಮಾತುಕತೆಗೆ ಮುಂದಾಗಬಾರದು; ಅಥವಾ ಮೂರನೇ ದೇಶದ ಮಧ್ಯಸ್ಥಿಕೆಗಾಗಿ ಭಾರತ ಯಾಕೆ ಚೀನ ಅಥವಾ ಅಮೆರಿಕವನ್ನು ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ.
 
ಕಾಶ್ಮೀರ ಸಮಸ್ಯೆ ಬಗೆಹರಿಸಲು ಎನ್ನೆಷ್ಟು ಕಾಲ ಕಾಯಬೇಕು? ಕೆಲವೊಮ್ಮೆ ಕೊಂಬುಗಳನ್ನು ಹಿಡಿದೇ ಗೂಳಿಗಳನ್ನು ಎಳೆಯಬೇಕಾಗುತ್ತದೆ. ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಮಿತ್ರತ್ವವನ್ನು ಹೊಂದಿದೆ. ಅಂತಹ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಕಾಶ್ಮೀರ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಬಹುದು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕೆಂದು ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಚೀನಾ ಕೂಡ ಸಿದ್ಧವಿದ್ದೇವೆಂದು ಹೇಳಿದೆ ಎಂದು ಹೇಳಿದ್ದಾರೆ. ಫಾರೂಕ್ ಅವರ ಈ ಹೇಳಿಕೆ ರಾಜಕೀಯ ವಲಯಗಳಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
 

ವೆಬ್ದುನಿಯಾವನ್ನು ಓದಿ