ಮಯನ್ಮಾರ್ನ ರಾಷ್ಟ್ರೀಯ ಸಲಹಾಕಾರ, ವಿದೇಶ ಮಂತ್ರಿ ಆಂಗಸಾನ್ ಸೂಕಿ ಭಾರತಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರ ಜತೆಗೆ ಲಾವೋಸ್ನಲ್ಲಿ ನಡೆದ ಭೇಟಿಯಲ್ಲಿ ಅವರು ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ.
ಸೂಕಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಆರೋಗ್ಯದ ಕುರಿತಾಗಿ ವಿಚಾರಿಸಿದರು ಮತ್ತು ಭಾರತ ಪ್ರವಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಲಾವೋಸ್ನಲ್ಲಿ ಆಸಿಯಾನ್ಗೆ ಸಂಬಂಧಿಸಿದಂತೆ ಜುಲೈ 26 ರಂದು ಸಿಂಗ್ ಮತ್ತು ಸೂಕಿ ನಡುವೆ ನಡೆದ ಸಭೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಎರಡು ದೇಶಗಳ ನಡುವೆ ವಿಭಿನ್ನ ಕ್ಷೇತ್ರಗಳಲ್ಲಿ ಸಹಕಾರ ಪಡೆಯುವುದರ ಕುರಿತಾಗಿ ಮಾತುಕತೆಯಾಯಿತು. ಸೌರ ವಿದ್ಯುತ್ ಬಳಕೆಯಲ್ಲಿ ಭಾರತದ ಅನುಭವದ ಬಗೆಗೆ ತಿಳಿಯಲು ನಾನು ಆಸಕ್ತಳಾಗಿದ್ದೇನೆ ಎಂದು ಸೂಕಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.