ಅಮ್ಮ(ಜಯಲಲಿತಾ) ಗೆಲುವಿನ ಸಂಭ್ರಮಾಚರಣೆ: ಅಟೋ ಚಾಲಕನಿಂದ ಕೇವಲ 1 ರೂ,ಗೆ ಅಟೋ ರೈಡ್

ಮಂಗಳವಾರ, 24 ಮೇ 2016 (14:18 IST)
ಎಐಎಡಿಎಂಕೆ ಅಧಿನಾಯಕಿ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿ ಆರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ಬೆಂಬಲಿಗರ ಹರ್ಷ ಹೇಳತೀರದಾಗಿದೆ. ಅಭಿಮಾನಿಗಳು ತಮ್ಮ ತಮ್ಮ ರೀತಿಯಲ್ಲಿಯೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
 
ನಗರದ ನಿವಾಸಿಯಾದ 61 ವರ್ಷ ವಯಸ್ಸಿನ ಅಟೋ ಚಾಲಕನೊಬ್ಬ ಅಮ್ಮಾ ಸಂಭ್ರಮಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದ್ದಾನೆ. ಗ್ರಾಹಕರಿಗೆ ಕೇವಲ 1 ರೂಪಾಯಿ ದರದಲ್ಲಿ ಅಟೋ ಸೇವೆಯನ್ನು ನೀಡಿದ್ದಾನೆ.
 
ಸೋಮವಾರದಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 102 ಪ್ರಯಾಣಿಕರಿಗೆ ಸೇವೆ ಒದಗಿಸಿ 102 ರೂಪಾಯಿ ಸಂಪಾದಿಸಿದ್ದಾನೆ.
 
ನಾನು ಅಮ್ಮ ಜಯಲಲಿತಾ ಅವರ ಕಟ್ಟಾ ಅಭಿಮಾನಿ. ಅಮ್ಮ ಆರನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವುದು ನನಗೆ ತುಂಬಾ ಸಂತಸ ತಂದಿತ್ತು. ಆದ್ದರಿಂದ ಪ್ರಯಾಣಿಕರಿಗೆ ವಿಶಿಷ್ಠ ಸೇವೆ ನೀಡಿ ಸಂಭ್ರಮ ಆಚರಿಸಲು ನಿರ್ಧರಿಸಿದೆ ಎಂದು ಅಟೋ ಚಾಲಕ ಆರ್‌.ಎಂ.ಮದಿವಣ್ಣನ್ ತಿಳಿಸಿದ್ದಾನೆ.
 
ಮದಿವಣ್ಣನ್, ಎಸ್‌ಐಎಚ್‌ಎಸ್ ಕಾಲೋನಿಯ ಕಾವೇರಿ ನಗರದ ನಿವಾಸಿಯಾಗಿದ್ದು 1975 ರಿಂದಲೂ ಎಐಎಡಿಎಂಕೆ ಪಕ್ಷದ ಸದಸ್ಯರಾಗಿದ್ದಾರೆ. ಕೊಯಿಮುತ್ತೂರ್ ನಗರದಲ್ಲಿ ಕಳೆದ 41 ವರ್ಷಗಳಿಂದ ಅಟೋ ಓಡಿಸುತ್ತಿದ್ದೇನೆ. ಎಂಜಿಆರ್ ಕಾಲದಿಂದಲೂ ನಾನು ಪಕ್ಷದ ಸದಸ್ಯನಾಗಿದ್ದೇನೆ ನಾನು ಸಿಎಂ ಜಯಲಲಿತಾ ಅವರ ಅಭಿಮಾನಿ. ತಮಿಳುನಾಡು ಜನತೆಗೆ ಅಮ್ಮ ಉತ್ತಮ ಕಾರ್ಯಗಳನ್ನು ಮಾಡಿದ್ದರಿಂದ ಸಹಜವಾಗಿಯೇ ಅವರನ್ನು ಪುನರಾಯ್ಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ. 
 
ಎಐಎಡಿಎಂಕೆ ಪಕ್ಷ ಸರಕಾರ ರಚಿಸಲಿದೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಮದಿವಣ್ಣನ್, ತನ್ನ ಕಾಲೋನಿಯಲ್ಲಿರುವ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾನೆ. 
 
ಸಿಎಂ ಜಯಲಲಿತಾ ಅಮ್ಮ ಕ್ಯಾಂಟಿನ್ ಆರಂಭಿಸುವ ಮೂಲಕ 1 ರೂಪಾಯಿಗೆ ಇಡ್ಡಿ ದೊರೆಯುತ್ತಿರುವುದರಿಂದ ಬಡವರು ಕೂಡಾ ಉಪಹಾರ ಮಾಡಲು ಸಾಧ್ಯವಾಗಿದೆ. ಅಮ್ಮ ಅನೇಕ ಜನರಿಗೆ ನೆರವಾಗಿದ್ದಾರೆ. ಆದ್ದರಿಂದ ನನ್ನ ಕೈಲಾದ ಮಟ್ಟಿಗೆ ಜನಸೇವೆ ಮಾಡಲು ನಿರ್ಧರಿಸಿದೆ ಎಂದು ಅಟೋ ಚಾಲಕ ಮದಿವಣ್ಣನ್ ತಿಳಿಸಿದ್ದಾನೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ