ನವದೆಹಲಿ : ಕಾಂಗ್ರೆಸ್ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆಯ ಏಳನೇ ದಿನದ ಪಾದಯಾತ್ರೆ ಆರಂಭವಾಗಿದ್ದು,
ಇಂದು 100 ಕಿಲೋ ಮೀಟರ್ ಹಾದಿಯನ್ನು ಯಾತ್ರೆ ಕ್ರಮಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಹೊರಟಿರುವ ಯಾತ್ರೆ ಕೇರಳದ ಕಣಿಯಾಪುರಂ ತಲುಪಿದೆ.
ಇಂದು ಕಣಿಯಾಪುರಂನಿಂದ ಪಾದಯಾತ್ರೆ ಹೊರಟಿದ್ದು, ಮುಂದಿನ 17 ದಿನಗಳ ಕಾಲ ಕೇರಳದ ಬೇರೆ ಬೇರೆ ನಗರಗಳ ಮೂಲಕ ಯಾತ್ರೆ ಸಾಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಕನಸು ಭಗ್ನಗೊಂಡಿದೆ, ಚದುರಿಹೋಗಿಲ್ಲ.
ಕನಸನ್ನು ನನಸಾಗಿಸಲು ನಾವು ಭಾರತವನ್ನು ಸಂಪರ್ಕಿಸುತ್ತಿದ್ದೇವೆ. 100 ಕಿಮೀ ಮುಗಿದಿದೆ, ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್ ಮೆರವಣಿಗೆಯು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಲಿದೆ. ಸದ್ಯ ಕೇರಳದಲ್ಲಿರುವ ಯಾತ್ರೆ, ಮುಂದಿನ 18 ದಿನಗಳ ಕಾಲ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ.