ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಇಂದು ಭಾರತ ರತ್ನ ಪ್ರದಾನ ಮಾಡಲಾಯಿತು.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪರವಾಗಿ ಪುತ್ರ, ಜೆಡಿಯು ನಾಯಕ ರಾಮನಾಥ ಠಾಕೂರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಪರವಾಗಿ ಪುತ್ರಿ ನಿತ್ಯಾ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪರವಾಗಿ ಮೊಮ್ಮಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ಪ್ರಶಸ್ತಿಯನ್ನು ಸ್ವೀಕರಿಸಿದರೆ, ಇತ್ತ ಪಿ.ವಿ.ನರಸಿಂಹರಾವ್ ಅವರ ಪುತ್ರ ಪಿ.ವಿ.ಪ್ರಭಾಕರ ರಾವ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಕೇಂದ್ರ ಸಚಿವ ಸಂಪುಟ ನಾಯಕರು ಇದ್ದರು.