ಚೆನ್ನೈನಲ್ಲಿ ಇದ್ದಕ್ಕಿದ್ದಂತೆ ಕುಸಿದ ರಸ್ತೆ: ಬಸ್, ಕಾರು ಬೃಹತ್ ಗುಂಡಿಯೊಳಗೆ
ಭಾನುವಾರ, 9 ಏಪ್ರಿಲ್ 2017 (16:58 IST)
ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬೃಹತ್ ಬಾವಿಯ ರೀತಿಯ ಹಳ್ಳ ುಂಟಾಗಿ ಬಸ್ ಮತ್ತು ಕಾರು ಸಿಲುಕಿಕೊಂಡ ಘಟನೆ ಚೆನ್ನೈನ ಅಣ್ಣಾಸಲೈ ಪ್ರದೇಶದ ಅಣ್ಣಾ ಫ್ಲೈಓವರ್ ಬಳಿ ಭಾನುವಾರ ನಡೆದಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದಲೇ ಈ ಹಳ್ಳ ಬಿದ್ದಿದೆ ಎನ್ನಲಾಗಿದೆ.
2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಣ್ಣಾಸ್ಕ್ವೇರ್-ವಡಪಳನಿ ಬಳಿ ಚಾಲಕ ಬಸ್ ನಿಲ್ಲಿಸಿದಾಗ ಕೊಂಚ ಜರುಗಿದ ಅನುಭವವಾಗಿದೆ. ಟೈರ್ ಪಂಚರ್ ಆಗಿರಬಹುದೆಂದು ಚಾಲಕ ಭಾವಿಸಿದ್ದಾನೆ. ಕೆಳಗಿಳಿದು ನೋಡಿದಾಗ ರಸ್ತೆಯೇ ಗುಹೆ ರೀತಿ ಕುಸಿದಿರುವುದು ಕಂಡು ಗಾಬರಿಯಾಗಿದೆ. ಕೂಡಲೇ ಪ್ರಯಾಣಿಕರನ್ನ ಕೆಳಗಿಳಿಸಿದ್ದು, ಬಸ್ ಹಳ್ಳದೊಳಗೆ ಕುಸಿದಿದೆ.
ಬಾವಿಯೊಳಗೆ ಕುಸಿದಿರುವ ವಾಹನಗಳನ್ನ ಮೇಲೆತ್ತಲು ಕಾರ್ಯಾಚರಣೆ ನಡೆಯುತ್ತಿದೆ. ಇತ್ತಕಡೆ ವಾಹನಗಳು ಬರದಂತೆ ನಿರ್ಬಂಧ ಹೇರಲಾಗಿದೆ. ಇಲ್ಲಿನ ಮಣ್ಣು ಸಡಿಲವಾದ್ದರಿಂದ ಈ ಅವಘಡ ಸಂಭವಿಸಿದೆ ಎಂಬುದು ಸರ್ಕಾರದ ಸಮಜಾಯಿಷಿ.