ಬೆಂಗಳೂರು: 2024-25 ನೇ ಆರ್ಥಿಕ ವರ್ಷದಲ್ಲಿ ಅತೀ ಹೆಚ್ಚು ತಲಾ ಆದಾಯ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಂಬರ್ 1 ಆಗಿದ್ದು ಇದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೊಗಳಿದ್ದಾರೆ.
ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶದಲ್ಲಿ ಕರ್ನಾಟಕದಲ್ಲಿ ತಲಾ ಆದಾಯ ಕಳೆದ 10 ವರ್ಷಗಳಲ್ಲಿ ದ್ವಿಗುಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ತಲಾ ಆದಾಯ 2.05 ಲಕ್ಷ ರೂ.ಗಳಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ರಣದೀಪ್ ಸುರ್ಜೇವಾಲ ಇದೆಲ್ಲಾ ಸಾಧ್ಯವಾಗಿದ್ದು ಗ್ಯಾರಂಟಿ ಯೋಜನೆಗಳಿಂದ ಎಂದಿದ್ದಾರೆ. ಕರ್ನಾಟಕ ಸರ್ಕಾರದ ದೂರ ದೃಷ್ಟಿ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆಗಳಿಂದ ಇದು ಸಾಧ್ಯವಾಗಿದೆ ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಜನ ಸಾಮಾನ್ಯರನ್ನು ಸಬಲೀಕರಣಗೊಳಿಸಲು ಗ್ಯಾರಂಟಿ ಯೋಜನೆಗಳು ಸಹಾಯ ಮಾಡಿವೆ. ಗ್ಯಾರಂಟಿ ಯೋಜನೆಗಳು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ಸುಳ್ಳು ಹರಡಿತ್ತು. ಆದರೆ ಈಗ ಕೇಂದ್ರ ಹಣಕಾಸು ಸಚಿವಾಲಯದ ದತ್ತಾಂಶವೇ ನಿಜಾಂಶ ಬಯಲು ಮಾಡಿದೆ ಎಂದಿದ್ದಾರೆ.