ಪಾಟ್ನಾ : ಬಿಹಾರದಿಂದ ರಾಜ್ಯಸಭೆಗೆ ಈ ಬಾರಿ ಆಡಳಿತಾರೂಢ ಜೆಡಿಯು ಪಕ್ಷವು ಕನ್ನಡಿಗ ಹಾಗೂ ಉಡುಪಿ ಮೂಲದ ಅನಿಲ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ.
ಮೂಲತಃ ಮಂಗಳೂರಿನವರಾಗಿದ್ದ ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿದ್ದರು. ಮಹೇಂದ್ರ ಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇದೀಗ ಜೆಡಿಯು ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ 27 ರಂದು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ್ ಅವರ ನಿಧನದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಹಾರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದೇ ಮೇ 30 ರಂದು ಉಪಚುನಾವಣೆ ನಡೆಯಲಿದೆ.
ರಾಜ್ಯಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 19 ಕೊನೆಯ ದಿನವಾಗಿದೆ. ಮೇ 30ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಬಳಿಕ ಅದೇ ದಿನ ಮತ ಎಣಿಕೆ ಕಾರ್ಯ ನಡೆಯಲಿದೆ.
ಈ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕರೊಬ್ಬರು, ರಾಜ್ಯಸಭಾ ಉಪಚುನಾವಣೆಗೆ ಅನಿಲ್ ಹೆಗ್ಡೆಯವರ ನಾಮಪತ್ರ ಘೋಷಣೆ ಆಶ್ಚರ್ಯ ತಂದಿದೆ. ಇದು ಸಂಘಟನೆ ಮತ್ತು ಪಕ್ಷಕ್ಕಾಗಿ ಮೌನವಾಗಿ ದುಡಿಯುತ್ತಿರುವ ವ್ಯಕ್ತಿಗೆ ಸಿಕ್ಕ ಪ್ರತಿಫಲವಾಗಿದೆ.