ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಸೌದಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನಡುವೆ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸೌದಿ ಕ್ರೌನ್ ಪ್ರಿನ್ಸ್ ಫೆಬ್ರವರಿ 2019 ರಿಂದ 2ನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಜಿ20 ಶೃಂಗಸಭೆ ಹಿನ್ನಲೆ ಸೆಪ್ಟೆಂಬರ್ 8 ರಂದು ದೆಹಲಿಗೆ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ದ್ವಿಪಕ್ಷೀಯ ಮಾತುಕತೆಗಾಗಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಿದ್ದರು.
ಸೌದಿ ಕ್ರೌನ್ ಪ್ರಿನ್ಸ್ ಜೊತೆ ಉತ್ಪಾದಕ ಮಾತುಕತೆ ನಡೆಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಭಯ ನಾಯಕರು ವ್ಯಾಪಾರ ಸಂಬಂಧಗಳು ಮತ್ತು ಗ್ರಿಡ್ ಸಂಪರ್ಕ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ ಮತ್ತು ಅರೆವಾಹಕಗಳು ಸೇರಿದಂತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಅಗಾಧ ವ್ಯಾಪ್ತಿಯನ್ನು ಚರ್ಚಿಸಿದೆ ಎಂದು ತಿಳಿಸಿದರು.