ಮೋದಿ ಬಲೂಚಿಸ್ತಾನ್ ಹೇಳಿಕೆಗೆ ತಿರುಗೇಟು ನೀಡಿದ ಬಿಲಾವಲ್ ಭುಟ್ಟೋ

ಬುಧವಾರ, 17 ಆಗಸ್ಟ್ 2016 (20:16 IST)
ಬಲೂಚಿಸ್ತಾನ್, ಪಾಕ್ ಆಕ್ರಮಿತ ಕಾಶ್ಮಿರದ ಬಗ್ಗೆ ಹೇಳಿಕೆ ನೀಡುವುದಕ್ಕಿಂತ ಮೊದಲು ಪ್ರಧಾನಿ ಮೋದಿ ಕಾಶ್ಮಿರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳತ್ತ ಗಮನಹರಿಸಲಿ. ದೇಶದ ಸಾರ್ವಭೌಮತೆಯನ್ನು ರಕ್ಷಿಸುವ ತಾಕತ್ತು ಪಾಕಿಸ್ತಾನಕ್ಕಿದೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಹೇಳಿದ್ದಾರೆ. 
ಬಲೂಚಿಸ್ತಾನ್, ಗಿಲ್‌ಗಿಟ್ ಮತ್ತು ಪಿಓಕೆ ಬಗ್ಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆಗಳು ಪ್ರಚೋದನಾಕಾರಿ, ಬೇಜವಾಬ್ದಾರಿ ಮತ್ತು ಹಿಂಸಾತ್ಮಕವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕಾಶ್ಮಿರದಲ್ಲಿ ಕಾಶ್ಮಿರಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ದೇಶದಲ್ಲಿ ಮುಸ್ಲಿಮರು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಮೋದಿ ವಿವರಣೆ ನೀಡಲಿ ಎಂದು ಪಿಪಿಪಿ ಪಕ್ಷದ ಮುಖ್ಯಸ್ಥ ಬಿಲಾವಲ್ ಸವಾಲ್ ಹಾಕಿದ್ದಾರೆ.
 
ಬಲೂಚಿಸ್ತಾನ್ ಪಾಕಿಸ್ತಾನ ದೇಶದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಅಂತರಿಕ ವಿಷಯಗಳ ಬಗ್ಗೆ ಮೋದಿಯವರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.
 
ಕಳೆದ ಎರಡು ತಿಂಗಳುಗಳಲ್ಲಿ ಕಾಶ್ಮಿರ ಹೊತ್ತಿ ಉರಿಯುತ್ತಿದೆ. ಮುಗ್ದ ಕಾಶ್ಮಿರಿಗರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
 
ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದಲ್ಲಿ ಕೆಲವರು ಗೆಳೆಯರಿರಬಹುದು.ಆದರೆ, ಪಾಕಿಸ್ತಾನದ ಜನತೆ ಬಲೂಚಿಸ್ತಾನ್ ಅಥವಾ ದೇಶದ ಯಾವುದೇ ಅಂತರಿಕ ಸಮಸ್ಯೆಗಳ ಬಗ್ಗೆ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್‌ಗೆ ಪರೋಕ್ಷವಾಗಿ ಪಾಕಿಸ್ತಾನದ ವಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ