ನವದೆಹಲಿ: 2022-23 ನೇ ಸಾಲಿನಲ್ಲಿ ದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಕ್ಕೆ ಎಷ್ಟು ಆದಾಯ ಬಂದಿದೆ ಎನ್ನುವ ವಿವರವನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫೋರ್ಮ್ಸ್ (ಎಡಿಆರ್) ಬಹಿರಂಗಪಡಿಸಿದೆ.
ಒಟ್ಟು ಆರು ರಾಷ್ಟ್ರೀಯ ಪಕ್ಷಗಳ ಈ ವಿತ್ತೀಯ ವರ್ಷದ ಆದಾಯವೆಷ್ಟು ಎಂಬ ವಿವರವನ್ನು ಎಡಿಆರ್ ನೀಡಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಟಾಪ್ ಸ್ಥಾನದಲ್ಲಿದ್ದು, ಕಾಂಗ್ರೆಸ್ ನಂತರದ ಸ್ಥಾನದಲ್ಲಿದೆ. ಒಟ್ಟು ಆರು ಪಕ್ಷಗಳ ಆದಾಯ 3,077 ಕೋಟಿ ರೂ. ಎಂದು ವರದಿಯಲ್ಲಿ ಹೇಳಲಾಗಿದೆ.
ಆಡಳಿತಾರೂಢ ಬಿಜೆಪಿಗೆ ಗರಿಷ್ಠ ಆದಾಯವಿದ್ದು, ಇದರ ಆದಾಯ ಬರೋಬ್ಬರಿ 2,361 ಕೋಟಿ ರೂ. ಅಂದರೆ ಒಟ್ಟು ಆರು ರಾಷ್ಟ್ರೀಯ ಪಕ್ಷಗಳ ಆದಾಯದ ಪೈಕಿ ಶೇ. 76.73 ಬಿಜೆಪಿ ಬಳಿ ಆದಾಯವಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಬಳಿ ಕೇವಲ 452.375 ಕೋಟಿ ರೂ. ಆದಾಯವಿದೆ. ಬಿಜೆಪಿ, ಕಾಂಗ್ರೆಸ್ ನಂತಹ ಬಿಎಸ್ ಪಿ, ಎಎಪಿ, ಎನ್ ಪಿಪಿ ಮತ್ತು ಸಿಪಿಐ (ಎಂ) ಪಕ್ಷಗಳ ಆದಾಯ ವಿವರ ಬಹಿರಂಗವಾಗಿದೆ.
ಇದಕ್ಕಿಂತ ಮೊದಲಿನ ವರ್ಷಕ್ಕೆ ಹೋಲಿಸಿದರೆ ಬಿಜೆಪಿ ಆದಾಯದಲ್ಲಿ ಶೇ. 23.15 ರಷ್ಟು ಹೆಚ್ಚಳವಾಗಿದೆ. ಇನ್ನು, ಎನ್ ಪಿಪಿ ಆದಾಯ 47.20 ಲಕ್ಷದಿಂದ 7.09 ಕೋಟಿ ರೂ.ಗೆ ಏರಿಕೆಯಾಗಿದೆ. ಎಎಪಿ ಆದಾಯ 40.631 ಕೋಟಿಯಿಂದ 91.23 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಕಾಂಗ್ರೆಸ್, ಸಿಪಿಐಎಂ, ಬಿಎಸ್ ಪಿ ಆದಾಯದಲ್ಲಿ ಇಳಿಕೆಯಾಗಿದೆ. 2021-22 ನೇ ಸಾಲಿಗೆ ಹೋಲಿಸಿದರೆ ಕಾಂಗ್ರೆಸ್ ಆದಾಯ ಈಗ ಶೇ.16.42 ಇಳಿಕೆಯಾಗಿ 88.90 ಕೋಟಿ ರೂ.ಗೆ ತಲುಪಿದೆ. ಸಿಪಿಐ(ಎಂ) ಆದಾಯ 12.68 ರಷ್ಟು ಇಳಿಕೆಯಾಗಿ 20.575 ಕೋಟಿ ರೂ.ಗೆ ತಲುಪಿದೆ. ಬಿಎಸ್ ಪಿ ಶೇ. 33.14 ಆದಾಯ ಕಳೆದುಕೊಂಡಿದ್ದು 14.508 ಕೋಟಿ ರೂ.ಗೆ ತಲುಪಿದೆ.
ಬಿಜೆಪಿ ಒಟ್ಟು 2360.844 ಕೋಟಿ ರೂ. ಆದಾಯದಲ್ಲಿ ಖರ್ಚು ಮಾಡಿದ್ದು 1361. 684 ಕೋಟಿ ರೂ. ಮಾತ್ರ. ಕಾಂಗ್ರೆಸ್ 452.375 ಕೋಟಿ ರೂ. ಪೈಕಿ 467. 135 ಕೋಟಿ ರೂ. ಖರ್ಚು ಮಾಡಿದೆ. ಅಂದರೆ ಆದಾಯಕ್ಕಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದರ್ಥ. ಸಿಪಿಐ (ಎಂ) 141.666 ಕೋಟಿ ರೂ.ಗಳ ಪೈಕಿ 106.067 ಕೋಟಿ ರೂ. ಖರ್ಚು ಮಾಡಿತ್ತು. ಎಎಪಿ ಕೂಡಾ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದೆ. ಒಟ್ಟು 85.17 ಕೋಟಿ ರೂ. ಆದಾಯ ತೋರಿಸಿದ್ದರೂ ಖರ್ಚು ಮಾಡಿದ್ದು 102.051 ಕೋಟಿ ರೂ.