ಮಾಯಾವತಿಗೆ ಬಿಜೆಪಿ ನೋಟಿಸ್

ಶನಿವಾರ, 28 ಜನವರಿ 2017 (13:51 IST)
ಗ್ಯಾಂಗ್‌ಸ್ಟರ್ ಪರಿವರ್ತಿತ ರಾಜಕಾರಣಿ ಮುಕ್ತಾರ್ ಅನ್ಸಾರಿ ಮತ್ತು ಆತನ ಸಹೋದರನನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಂಡಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿಗೆ ಬಿಜೆಪಿ ಲೀಗಲ್ ನೋಟಿಸ್ ಕಳುಹಿಸಿದೆ. 

ಅನ್ಸಾರಿ ಗ್ಯಾಂಗ್ 2009ರಲ್ಲಿ ಸ್ಥಳೀಯ ಗುತ್ತಿಗೆದಾರ ಮನ್ನಾ ಸಿಂಗ್‌ನನ್ನು ಕೊಂದಿತ್ತು.  ಈ ಕೃತ್ಯದ ಪ್ರತ್ಯಕ್ಷದರ್ಶಿಯಾಗಿರುವ ಬಿಜೆಪಿ ನಾಯಕ ಅಶೋಕ್ ಸಿಂಗ್ ಮಾಯಾವತಿಗೆ ನೋಟಿಸ್ ರವಾನಿಸಿದ್ದಾರೆ. 
 
ಸಿಂಗ್, ಮಾಯಾವತಿ ವಿರುದ್ಧ ಜನವರಿ 30ರಂದು ಚುನಾವಣಾ ಆಯೋಗಕ್ಕೆ ಸಹ ದೂರು ನೀಡಲಿದ್ದಾರೆ. 
 
ನಾಲ್ಕು ಬಾರಿ ಶಾಸಕನಾಗಿರುವ ಅನ್ಸಾರಿ 'ಮೌ' ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮಾಯಾವತಿ ಜನವರಿ 26ರಂದು ಘೋಷಿಸಿದ್ದರು. ಅನ್ಸಾರಿ ಪುನರ್ ಸೇರ್ಪಡೆಗೆ ಬಿಎಸ್ಪಿಯಲ್ಲೂ ಅಸಮಾಧಾನ ಇರುವುದು ತಿಳಿದು ಬಂದಿದ್ದು, ಆತನ ವಿರುದ್ಧದ ಆರೋಪಗಳು ಇನ್ನು ಸಾಬೀತಾಗಿಲ್ಲ, ಹೀಗಾಗಿ ಅವರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳಲಾಗಿದೆ ಎಂದು ಮಾಯಾವತಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. 
 
ಅನ್ಸಾರಿ ಮಗ ಅಬ್ಬಾಸ್ ಮತ್ತು ಸಹೋದರ ಸಿಬ್ಗತುಲ್ಲಾ ಸಹ ಪಕ್ಷ ಸೇರಿದ್ದು, ಅವರು ಘೋಸಿ ಮತ್ತು ಮೊಹಮ್ಮದಾಬಾದ್‌ನಿಂದ ಚುನಾವಣೆಯನ್ನು ಎದುರಿಸಲಿದ್ದಾರೆ. 
 
1996ರಲ್ಲಿ 'ಮೌ' ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಸದ್ಯ ಅನ್ಸಾರಿ ಲಖನೌ ಜೈಲಿನಲ್ಲಿದ್ದಾನೆ. 

ಮನ್ನಾ ಸಿಂಗ್ ಕೊಲೆಯ ಪ್ರತ್ಯಕ್ಷದರ್ಶಿ ರಾಮ್ ಸಿಂಗ್ ಮೌರ್ಯನನ್ನು ಅನ್ಸಾರಿ ಗ್ಯಾಂಗ್ 2010ರಲ್ಲಿ ಹತ್ಯೆಗೈದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ