‘ಬಿಜೆಪಿ ಯಾವ ಕಾರಣಕ್ಕೂ ಗೆಲ್ಲಬಾರದು’:ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ಟೋಬರ್ 28-30ರವರೆಗೆ ಗೋವಾ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ.
ಬರುವ ವರ್ಷ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿಗೆ ತಾವು ಗೆಲ್ಲಬೇಕು ಎಂಬ ಭಾವಕ್ಕಿಂತಲೂ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂಬ ಕಿಚ್ಚು ಹೆಚ್ಚಾಗಿದೆ. ಅಂತೆಯೇ ಗೋವಾ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೋವಾದ ಜನರು ಕಳೆದ 10 ವರ್ಷಗಳಿಂದಲೂ ಬಿಜೆಪಿ ಅಧಿಕಾರದಡಿ ಸಂಕಷ್ಟಕ್ಕೀಡಾಗಿದ್ದಾರೆ. ನಾನು ಗೋವಾಕ್ಕೆ ಚೊಚ್ಚಲ ಭೇಟಿಗೆ ತಯಾರಿ ನಡೆಸುತ್ತಿದ್ದೇನೆ. ಈ ಹೊತ್ತಲ್ಲಿ ಬಿಜೆಪಿ ಮತ್ತು ಅದರ ಒಡೆದು ಆಳುವ ನೀತಿ ಪೂರ್ಣವಾಗಿ ನೆಲಕಚ್ಚುವಂತೆ ಮಾಡಲು ಜನರು, ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನಾವೆಲ್ಲ ಒಗ್ಗಟ್ಟಾಗುವ ಮೂಲಕ ಗೋವಾದಲ್ಲಿ ಒಂದು ಹೊಸ ಸರ್ಕಾರವನ್ನು ಆಡಳಿತಕ್ಕೆ ತರುತ್ತೇವೆ. ಅದು ಗೋವಾದ ಜನರ ಸರ್ಕಾರವಾಗಿರುತ್ತದೆ. ಜನರ ನಿರೀಕ್ಷೆಗಳನ್ನು ಪೂರೈಸುವ ಸರ್ಕಾರವಾಗಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿದಿದೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಗೆದ್ದಿದ್ದರೂ ಮತ್ತೆ ತಮ್ಮ ಸ್ವಕ್ಷೇತ್ರ ಭವಾನಿಪುರದಲ್ಲಿ ಗೆದ್ದು ಸಿಎಂ ಗಾದಿಯನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಮಧ್ಯೆ ತಮ್ಮ ಪಕ್ಷದ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಸದ್ಯ ಬಿಜೆಪಿ ಆಡಳಿತ ಇರುವ ತ್ರಿಪುರ ಮತ್ತು ಗೋವಾಕ್ಕೆ ಕಾಲಿಟ್ಟಿದ್ದಾರೆ.