ನಾಪತ್ತೆಯಾದ ಬಾಲಕ ಫೇಸ್‌ಬುಕ್‌ನಿಂದ ಪತ್ತೆ

ಬುಧವಾರ, 13 ಜುಲೈ 2016 (10:33 IST)
ಸಾಮಾಜಿಕ ಜಾಲತಾಣಗಳು ಯುವಜನಾಂಗದ ದಿಕ್ಕು ತಪ್ಪಿಸುತ್ತಿವೆ ಎಂಬ ಆರೋಪವಿದೆ. ಆದರೆ ಕೆಲವು ದೃಷ್ಟಾಂತಗಳು ಸಾಮಾಜಿಕ ಜಾಲತಾಣಗಳ ಉಪಯುಕ್ತತೆಯನ್ನು ಸಾರಿ ಹೇಳುತ್ತವೆ. ನವದೆಹಲಿಯಲ್ಲಿ ಕಳೆದೊಂದು ವರ್ಷದ ಹಿಂದೆ ನಾಪತ್ತೆಯಾದ ಬಾಲಕನೋರ್ವನನ್ನು ಪತ್ತೆ ಹಚ್ಚಲು ಇದೇ ಸಾಮಾಜಿಕ ಜಾಲತಾಣ ನೆರವಾಗಿದೆ.
ಬರೊಬ್ಬರಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಮತ್ತೆ ತನ್ನ ಕುಟುಂಬವನ್ನು ಸೇರುವಂತಾಗಿದೆ. 
 
ಕಳೆದ ವರ್ಷ ಮೇ 9 ರಂದು ಖಜೂರಿ ಖಾಸ್ ನಿವಾಸಿ ರೇಖಾ ದೇವಿ ಮಗ ಟ್ಯೂಷನ್‌ಗೆಂದು ಹೋದವನು ನಾಪತ್ತೆಯಾಗಿದ್ದ. ಎಷ್ಟು ಹುಡುಕಿದರೂ ಆತ ಪತ್ತೆಯಾಗಿರಲಿಲ್ಲ. ಕೊನೆಗೆ ರೇಖಾ ಖಜೂರಿ ಖಾಸ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು.
 
ಆದರೆ ಎಷ್ಟು ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ. ಇತ್ತೀಚಿಗೆ ಪೊಲೀಸರಿಗೆ ಫೇಸ್‌ಬುಕ್ ಪ್ರೊಫೈಲ್ ಫೋಟೋವೊಂದು ಬಾಲಕನ ಮುಖಕ್ಕೆ ಹೋಲುತ್ತಿರುವುದು ಕಂಡು ಬಂದಿದೆ. ಆ ಬಾಲಕ ನಾಪತ್ತೆಯಾದ ಹಿರಿಯ ಸಹೋದರ ಪವನ್ ಜತೆ 2015ರ ನವೆಂಬರ್ ತಿಂಗಳಿಂದ ಈ ವರ್ಷ ಎಪ್ರಿಲ್ ತಿಂಗಳವರೆಗೂ ಚಾಟ್ ಮಾಡಿರುವುದು ಸಹ ತನಿಖೆ ವೇಳೆ ಬಯಲಾಗಿದೆ. ಆದರೆ ಆತ ತಾನೆಲ್ಲಿದ್ದೇನೆ ಎಂದು ಮಾತ್ರ ಬಾಯ್ಬಿಟ್ಟಿರಲಿಲ್ಲ.
 
ಸೈಬರ್ ಸೆಕ್ಯೂರಿಟಿ ಸೆಲ್ ಸಹಾಯದೊಂದಿಗೆ ಮಾಹಿತಿ ಕಲೆ ಹಾಕಿದಾಗ ಆತ ಶ್ರೀನಗರದಲ್ಲಿರುವುದು ಪತ್ತೆಯಾಗಿದೆ. 
 
ಕಣಿವೆನಾಡಿನಲ್ಲಿ ಅಕ್ಕಿ ವ್ಯಾಪಾರಿಯ ಜತೆ ಕೆಲಸ ಮಾಡುತ್ತಿದ್ದ ಆತನನ್ನು ಪೊಲೀಸರು ಮರಳಿ ಕರೆ ತಂದಿದ್ದಾರೆ.
ಚೆನ್ನಾಗಿ ಓದುತ್ತಿಲ್ಲವೆಂದು ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟು ಹೋಗಿರುವುದಾಗಿ ಬಾಲಕ ಬಾಯ್ಬಿಟ್ಟಿದ್ದಾನೆ. ಮನೆಯಿಂದ ಓಡಿ ಹೋದ ಬಳಿಕ  ಮದುವೆ ಸಮಾರಂಭಗಳಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಬಾಲಕ ಹೇಳಿದ್ದಾನೆ.
 
ಪ್ರೀತಿಯ ಮಗನ ಅಗಲಿಕೆಯಿಂದ ನೊಂದಿದ್ದ ಕುಟುಂಬವೊಂದು ಈಗ ನಿರಾಳವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ