ಹೈದ್ರಾಬಾದ್:ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ದೇಶದ ಕೀರ್ತಿ ಮೆರೆದಿದ್ದಾರೆ. ತಮ್ಮ 30ನೇ ವಯಸ್ಸಿನಲ್ಲಿ ದಿವ್ಯಾ ಪೈಲಟ್ ಆಗಿದ್ದು, ಬೋಯಿಂಗ್ 777 ವಿಮಾನದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಆ್ಯನಿ ದಿವ್ಯಾ ಜನಿಸಿದ್ದು ಪಂಜಾಬ್ ಪಠಾಣ್ ಕೋಟ್ ನಲ್ಲಿ. ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ಅವರು ಸೇನೆಯಿಂದ ನಿವೃತ್ತರಾದ ಬಳಿಕ ಅವರ ಕುಟುಂಬ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಸ್ಥಳಾಂತರವಾಗಿತ್ತು. ಆಗಿನ್ನೂ ದಿವ್ಯಾ ಚಿಕ್ಕವಳು. ಚಿಕ್ಕವಯಸ್ಸಿನಿಂದಲೇ ಆಂಧ್ರ ಪ್ರದೇಶದಲ್ಲಿ ಬೆಳೆದ ದಿವ್ಯಾಗೆ ಪೈಲಟ್ ಆಗಬೇಕು ಎಂಬ ಮಹದಾಸೆ ಇತ್ತಂತೆ. ಅದೇ ನಿಟ್ಟಿನಲ್ಲಿ ಅಭ್ಯಾಸ ಮಾಡಿದ ದಿವ್ಯಾ ಕೊನೆಗೂ ಪೈಲಟ್ ಆಗುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದಾರೆ.