ಬೆಂಗಳೂರು: ಚುನಾವಣಾ ಅಕ್ರಮದ ಕುರಿತು ಮೊಸಳೆಕಣ್ಣೀರು ಹಾಕಲು ಆ.5ರಂದು ರಾಜ್ಯಕ್ಕೆ ಬರುತ್ತಿರುವ ರಾಹುಲ್ ಗಾಂಧಿಯವರು ಕಳೆದ 24 ತಿಂಗಳುಗಳಲ್ಲಿ ಕರ್ನಾಟಕದಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಇಲ್ಲಿಗೆ ಬಂದಿಲ್ಲ ಎಂದು ಸಂಸದ ಪಿ.ಸಿ. ಮೋಹನ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಕೊಟ್ಟು, ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಮೃತಪಟ್ಟಾಗ ತಾವು ಯಾಕೆ ಕರ್ನಾಟಕಕ್ಕೆ ಬಂದಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮೈಕ್ರೋ ಫೈನಾನ್ಸ್ ಕಿರುಕುಳದಿಂದ 50ಕ್ಕೂ ಹೆಚ್ಚು ಜನರು ಸಾವಿಗೀಡಾದಾಗ, ಆತ್ಮಹತ್ಯೆ ಮಾಡಿಕೊಂಡಾಗ ತಾವು ಯಾಕೆ ಬರಲಿಲ್ಲ? ಆರ್‍ಸಿಬಿ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಸಾವಿಗೀಡಾದಾಗ ರಾಹುಲ್ ಅವರು ಯಾಕೆ ಕರ್ನಾಟಕಕ್ಕೆ ಬರಲಿಲ್ಲ? ಎಂದು ಕೇಳಿದರು.
ಬಿಹಾರ ಚುನಾವಣೆ ಇನ್ನು ಕೆಲವೇ ತಿಂಗಳಲ್ಲಿ ಬರಲಿದೆ. ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಗೊತ್ತಾಗಿ ನಾಟಕ ಮಾಡಲು ಬರುತ್ತಿದ್ದಾರೆ. ಕಾಂಗ್ರೆಸ್ ಗೆದ್ದಾಗ ಪ್ರಜಾಪ್ರಭುತ್ವದ ಗೆಲುವು ಎನ್ನುತ್ತಾರೆ. ಕಾಂಗ್ರೆಸ್ ಸೋತಿದ್ದರೆ ಇವಿಎಂ ಮೇಲೆ ಅಥವಾ ಬೇರೆ ಯಾರ ಮೇಲೋ ಆರೋಪಿಸುವುದು ತಮಗೆ ತಿಳಿದಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತು ಪಕ್ಷದ ಪ್ರಮುಖರು ಇದ್ದರು.