ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು : ಹೈಕೋರ್ಟ್
ಗುರುವಾರ, 14 ಜುಲೈ 2022 (13:21 IST)
ಮುಂಬೈ : ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಗಳೊಂದಿಗೆ ಪೋಲೆಂಡ್ಗೆ ಸ್ಥಳಾಂತರಗೊಳ್ಳಲು ಅನುಮತಿ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಪುಣೆಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಕಂಪನಿಯು ಪೋಲೆಂಡ್ನಲ್ಲಿ ಪ್ರಾಜೆಕ್ಟ್ ಆಫರ್ ಮಾಡಿತ್ತು. ಈ ಕಾರಣಕ್ಕೆ 2015ರಿಂದ ಪತಿಯಿಂದ ದೂರವಿರುವ ಮಹಿಳೆ ತನ್ನ 9 ವರ್ಷದ ಪುತ್ರಿ ಜೊತೆ ಪೋಲೆಂಡ್ಗೆ ಹೋಗಲು ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗೆ ಪತಿ, ತಂದೆ-ಮಗಳ ಬಾಂಧವ್ಯವನ್ನು ಮುರಿಯುವ ಏಕೈಕ ಉದ್ದೇಶದಿಂದ ಪ್ರೊಜೆಕ್ಟ್ ಹೆಸರನ್ನು ಹೇಳಿಕೊಂಡು ಪೋಲೆಂಡ್ಗೆ ಹೋಗುತ್ತಿದ್ದಾಳೆ. ಮಗಳು ತನ್ನಿಂದ ದೂರವಾದರೆ ಮತ್ತೆ ಆಕೆಯನ್ನು ನೋಡಲು ಸಾಧ್ಯವಿಲ್ಲ.
ವೃತ್ತಿ ಜೀವನದ ಕಾರಣ ನೀಡಿ ಮಗಳನ್ನು ತಂದೆಯಿಂದ ಬೇರೆ ಮಾಡುವುದು ಸರಿಯಲ್ಲ. ಅಷ್ಟೇ ಅಲ್ಲದೇ ನೆರೆಯ ದೇಶಗಳಾದ ಉಕ್ರೇನ್ ಮತ್ತು ರಷ್ಯಾದಿಂದಾಗಿ ಪೋಲೆಂಡ್ನಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿ ಅನುಮತಿ ನೀಡಬಾರದು ಎಂದು ವಾದಿಸಿದ್ದರು.
ಇಲ್ಲಿಯವರೆಗೆ ಮಗಳನ್ನು ತಾಯಿ ಏಕಾಂಗಿಯಾಗಿ ಬೆಳೆಸಿದ್ದಾರೆ. ಬಾಲಕಿಯ ವಯಸ್ಸನ್ನು ಪರಿಗಣಿಸಿ ಆಕೆ ತನ್ನ ತಾಯಿಯೊಂದಿಗೆ ಹೋಗುವುದು ಮುಖ್ಯ ಎಂದು ಹೇಳಿತು. ಅಷ್ಟೇ ಅಲ್ಲದೇ ಮಗಳ ಜೊತೆ ವರ್ಚುಯಲ್ ಆಗಿ ಮಾತನಾಡಲು ತಂದೆಗೆ ಅನುಮತಿ ನೀಡಬೇಕು.
ತಂದೆ ಮಗಳ ಭೇಟಿಗಾಗಿ ಪ್ರತಿ ರಜಾ ಸಮಯದಲ್ಲಿ ತಾಯಿ ಭಾರತಕ್ಕೆ ಮರಳಬೇಕು ಎಂದು ಸೂಚಿಸಿತು. ಈ ಸಂದರ್ಭದಲ್ಲಿ ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ನಡುವೆ ಮಧ್ಯೆ ಆಯ್ಕೆಯನ್ನು ಕೇಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಮಗಳು ಹೊರ ದೇಶಕ್ಕೆ ಹೋದರೆ ಆತಂಕಕ್ಕೆ ಒಳಗಾಗುತ್ತಾಳೆ ಎಂಬ ತಂದೆ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿತು. ಮಕ್ಕಳು ತಮ್ಮ ಹೆತ್ತವರೊಂದಿಗೆ ಸ್ಥಳಾಂತರಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಕೆಲಸ ಮಾಡುವ ಮಹಿಳೆ ತನ್ನ ಜವಾಬ್ದಾರಿಯ ಕಾರಣದಿಂದ ತನ್ನ ಮಗುವನ್ನು ಡೇ-ಕೇರ್ ಸೌಲಭ್ಯದಲ್ಲಿ ಬಿಡುವುದು ಇಂದು ಸಾಮಾನ್ಯವಾಗಿದೆ ಎಂದು ಹೇಳಿತು.