ನವದೆಹಲಿ : 2016-21ರ ಅವಧಿಯಲ್ಲಿ 7.5 ಲಕ್ಷ ಭಾರತೀಯರು ತಮ್ಮ ಭಾರತೀಯ ಪೌರತ್ವ ತ್ಯಜಿಸಿದ್ದಾರೆ.
ಇದೇ ಅವಧಿಯಲ್ಲಿ 6000 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂಬ ವಿದೇಶಾಂಗ ಸಚಿವಾಲಯದ ದಾಖಲೆಗಳಿಂದ ತಿಳಿದುಬಂದಿದೆ.
ಇವರೆಲ್ಲಾ ವೈಯಕ್ತಿಕ ಕಾರಣಗಳನ್ನು ನೀಡಿ ಭಾರತೀಯ ಪೌರತ್ವ ತ್ಯಜಿಸಿದ್ದು, 106 ಬೇರೆ ಬೇರೆ ದೇಶಗಳಿಗೆ ತೆರಳಿದ್ದಾರೆ. ಈ ಪೈಕಿ ಅತಿ ಹೆಚ್ಚು ಜನರು ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಪ್ರೇಲಿಯಾಕ್ಕೆ ತೆರಳಿದ್ದಾರೆ. ಈ ನಾಲ್ಕು ದೇಶಗಳಿಗೆ ತೆರಳಿದವರೇ ಪಾಲೇ ಶೇ.82ರಷ್ಟಿದೆ.
ಇನ್ನು ಪಾಕಿಸ್ತಾನಕ್ಕೆ ತೆರಳಲೆಂದು ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ 31, ಚೀನಾಕ್ಕೆ ತೆರಳಿದವರ ಸಂಖ್ಯೆ 2174. ಕಳೆದ 5 ವರ್ಷಗಳ ಪೈಕಿ 2019ರಲ್ಲಿ ಅತಿ ಹೆಚ್ಚು ಅಂದರೆ 1.44 ಲಕ್ಷ ಜನರು, 2016ರಲ್ಲಿ 1.41 ಲಕ್ಷ ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ.
ಇನ್ನು ಇದೇ ಅವಧಿಯಲ್ಲಿ 5891 ವಿದೇಶಿಯರು ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ. ಜೊತೆಗೆ 2021ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರತೀಯ ಪೌರತ್ವ ಕೋರಿದ್ದ 7306 ಪಾಕಿಸ್ತಾನಿಯರು, 1152 ಆಫ್ಘನ್ನರು ಸೇರಿದಂತೆ 10635 ವಿದೇಶಿಯರ ಪೌರತ್ವ ಅರ್ಜಿ ಇನ್ನೂ ಬಾಕಿ ಇದೆ ಎಂದು ಅಂಕಿ ಅಂಶಗಳು ಹೇಳಿವೆ.