ನವದೆಹಲಿ: ಅರವಿಂದ್ ಕೇಜ್ರಿವಾಲ್.. 15 ವರ್ಷದಿಂದ ಕಾಂಗ್ರೆಸ್ ಆಡಳಿತ ನೋಡಿ ಬೇಸತ್ತಿದ್ದ ದೆಹಲಿ ಜನತೆಗೆ ಹೊಸ ಭರವಸೆ ನೀಡಿದ ನಾಯಕ. ಆದರೆ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್ ಸೋತು ಹೊದರಾ? ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನೋಡಿದ ಮೇಲೆ ಇಂತಹದ್ದೊಂದು ಅನುಮಾನ ಬರುತ್ತದೆ.
ರಾಜಕೀಯ ಬ್ಯಾಕ್ ಗ್ರೌಂಡ್ ಇಲ್ಲದಿದ್ದರೂ, ಸಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಂದು ಎಬ್ಬಿಸಿದ್ದ ಹೊಸ ಪರಿವರ್ತನೆಯ ಅಲೆಯಲ್ಲಿ ಲಾಭ ಪಡೆದುಕೊಂಡವರು ಕೇಜ್ರಿವಾಲ್. ಅವರಿಗೆ ಮೊದಲ ಬಾರಿಗೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವಾಗಲೂ ಮತದಾರನಿಗೆ ಅನುಮಾನವಿತ್ತು.
ಅದಕ್ಕೆ ಮೊದಲ ಬಾರಿಗೆ ಬಹುಮತ ಸಿಕ್ಕಿರಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ನಡೆಸಲಾರೆ ಎಂದ ಕೇಜ್ರಿವಾಲ್ ನೋಡಿ ದೆಹಲಿ ಜನತೆಗೆ ಅವರ ಮೇಲೆ ಅದೊಂಥರಾ ಅಭಿಮಾನ ಮೂಡಿತ್ತು. ಬಹುಮತ ಬಂದು ಕೇಜ್ರಿವಾಲ್ ಸಿಎಂ ಆದರು.
ಆದರೆ ಸಿಎಂ ಆದ ಮೇಲೆ ಅವರ ಭರವಸೆಗಳು ಇತರ ರಾಜಕೀಯ ಪಕ್ಷಗಳ ಭರವಸೆಗಿಂತ ಭಿನ್ನವಲ್ಲ ಎಂದು ಜನತೆಗೆ ಅರಿವಾಯಿತು. ಯಾವಾಗ ಬಿಜೆಪಿಯಲ್ಲಿ ನರೇಂದ್ರ ಮೋದಿ ಮೋಡಿ ಶುರುವಾಯಿತೋ, ಕೇಜ್ರಿವಾಲ್ ಹುಟ್ಟಿಸಿದ್ದ ಹೊಸ ಅಲೆ ಮಂಕಾಗಲು ಪ್ರಾರಂಭವಾಯಿತು.
ಆಗಿನಿಂದ ಪ್ರಧಾನಿ ಮೋದಿ ಜತೆ ಗುದ್ದಾಡಿಕೊಂಡೇ ಹೆಚ್ಚಿನ ಸಮಯ ಕಳೆದ ಕೇಜ್ರಿವಾಲ್ ತಮ್ಮ ಬುಡವನ್ನು ಮರೆತರು. ಹಾಗಾಗಿ ಪಕ್ಷದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಕೆಲವರು ಪಕ್ಷ ಬಿಟ್ಟರೆ, ಇನ್ನು ಕೆಲವರು ಟಿಕೆಟ್ ಹಂಚಿಕೆಯಲ್ಲಿನ ಅನ್ಯಾಯದ ಬಗ್ಗೆ ಧ್ವನಿಯೆತ್ತಿದರು. ಆದರೆ ಕೇಜ್ರಿವಾಲ್ ಇದ್ಯಾವುದಕ್ಕೂ ಕಿವಿಗೊಡದೇ ಇದ್ದಿದ್ದು, ಕೆಲವು ನಿಷ್ಠಾವಂತರ ಅಸಮಾಧಾನಕ್ಕೆ ಕಾರಣವಾಯಿತು.
ಇದರ ಪರಿಣಾಮವೇ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆ. ಎರಡೂ ಕಡೆ ಎಎಪಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಲ್ಲಿತ್ತು. ಆದರೆ ಭರವಸೆ ಹುಸಿಯಾಯಿತು. ಇದೀಗ ಕೇಜ್ರಿವಾಲ್ ನಾಯಕತ್ವದ ಮೇಲೆಯೇ ಪಕ್ಷದೊಳಗೇ ಅಸಮಾಧಾನ ಮೂಡುವಷ್ಟು ಹಳಸಿದೆ. ಆದಷ್ಟು ಬೇಗ ಕೇಜ್ರಿವಾಲ್ ಈ ಗಾಯಗಳಿಗೆ ತೇಪೆ ಹಚ್ಚಬೇಕಿದೆ. ಹೊಸ ಪರಿಣಾಮಕಾರಿ ನಾಯಕರನ್ನು ಹುಟ್ಟು ಹಾಕಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ