ಕಪ್ಪು ಹಣದ ಪೊಳ್ಳು ಭರವಸೆ ನೀಡಿದ್ದ ಮೋದಿ ಜನತೆಯ ಕ್ಷಮೆಯಾಚಿಸಲಿ: ಕಾಂಗ್ರೆಸ್

ಮಂಗಳವಾರ, 6 ಸೆಪ್ಟಂಬರ್ 2016 (16:13 IST)
ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇನೆ ಎಂದು ಸುಳ್ಳು, ಪೊಳ್ಳು ಭರವಸೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಎಂಟು ಬಾರಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
 
ಪ್ರಧಾನಮಂತ್ರಿ ಮೋದಿ ಚುನಾವಣೆ ಸಂದರ್ಭದಲ್ಲಿ 100 ದಿನಗಳೊಳಗಾಗಿ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇನೆ ಎಂದು ದೇಶದ ಜನತೆಗೆ ಭರವಸೆ ನೀಡಿದ್ದರು. ಮೋದಿ ಸರಕಾರ ಅಧಿಕಾರಕ್ಕೆ ಬಂದು ಇಂದಿಗೆ 827 ದಿನಗಳಾಗಿವೆ. ಎಲ್ಲಿದೆ ಕಪ್ಪು ಹಣ? ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.
 
ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬ ಭಾರತೀಯನ ಖಾತೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುತ್ತೇನೆ ಎಂದಿದ್ದರು. ಇಂದಿಗೂ ಜನತೆ ತಮ್ಮ ಖಾತೆಗಳಲ್ಲಿ ಹಣ ಜಮೆಯಾಗಿದೆಯೇ ಎಂದು ನೋಡುತ್ತಿದ್ದಾರೆ. ಮೋದಿ ನೀಡಿದ ಭರವಸೆ ಎಲ್ಲಿ ಹೋಯಿತು ಎಂದು ಲೇವಡಿ ಮಾಡಿದ್ದಾರೆ.
 
ಚೀನಾದ ಹಾಂಗ್‌ಝೌನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಪ್ಪು ಹಣದ ಕಾಳಸಂತೆಕೋರರಿಗೆ ಸ್ವರ್ಗವಾಗಿಸಿರುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ