ಅವ್ಯವಹಾರ ಪ್ರಕರಣ: ಮಹಾರಾಷ್ಟ್ರ ಸಚಿವ ಕೇದಾರ್ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಸೋಮವಾರ, 23 ಆಗಸ್ಟ್ 2021 (14:07 IST)
ನಾಗಪುರ: ನಾಗಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 2002ರಲ್ಲಿ ನಡೆದ ₹ 150 ಕೋಟಿ ಅವ್ಯವಹಾರ ಪ್ರಕರಣದ ಆರೋಪಿಯಾಗಿರುವ ಮಹಾರಾಷ್ಟ್ರದ ಸಚಿವ ಸುನಿಲ್ ಕೇದಾರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕ ಆಶಿಶ್ ದೇಶಮುಖ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಸುನಿಲ್ ಅವರು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಶಿವಸೇನಾ ಮತ್ತು ಎನ್ಸಿಪಿ ಜತೆಗೆ ಅಧಿಕಾರ ಹಂಚಿಕೊಂಡಿರುವ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಈ ಪ್ರಕರಣದಲ್ಲಿ ತಮಗೆ ಆಪ್ತರಾಗಿರುವ ವಕೀಲರೊಬ್ಬರನ್ನು ಸುನಿಲ್ ಕೇದಾರ್ ಅವರು ಸರ್ಕಾರಿ ವಕೀಲರನ್ನಾಗಿ ನೇಮಿಸಿರುವುದೇ ಆಶಿಶ್ ದೇಶಮುಖ್ ಅವರ ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದೆ.
'ಕೇದಾರ್ ಅವರು 19 ವರ್ಷಗಳಿಂದ ಪ್ರಕರಣವನ್ನು ಒಂದಿಲ್ಲೊಂದು ರೀತಿಯಲ್ಲಿ ವಿಳಂಬಗೊಳಿಸುತ್ತಲೇ ಇದ್ದಾರೆ. ಪ್ರಕರಣ ಇದೀಗ ಕೊನೆಯ ಹಂತಕ್ಕೆ ಬಂದಿದೆ. ತಮ್ಮ ವಿರುದ್ಧ ಪ್ರಬಲವಾಗಿ ವಾದ ಮಂಡಿಸದೆ ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಮಾಡುವ ಸಲುವಾಗಿಯೇ ಸರ್ಕಾರಿ ವಕೀಲರ ನೇಮಕಾತಿ ನಡೆದಿದೆ. ಹೀಗಾಗಿ ಈ ನೇಮಕಾತಿ ರದ್ದುಪಡಿಸುವುದರ ಜತೆಗೆ ಕೇದಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು' ಎಂದು ದೇಶಮುಖ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.